ADVERTISEMENT

24 ಗಂಟೆ ಮದ್ಯ, ಊಟಕ್ಕೆ ಅವಕಾಶ ನೀಡಿ; ಹೋಟೆಲ್ ಮಾಲೀಕರ ಸಂಘ ಆಗ್ರಹ

ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 21:30 IST
Last Updated 14 ನವೆಂಬರ್ 2024, 21:30 IST
.
.   

ಬೆಂಗಳೂರು: ಪ್ರವಾಸಿ ಸ್ಥಳಗಳಲ್ಲಿನ ಹೋಟೆಲ್‌ಗಳಲ್ಲಿ 24 ಗಂಟೆಯೂ ಮದ್ಯ ಹಾಗೂ ಊಟದ ವ್ಯವಸ್ಥೆಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ಬಾಳಿ, ರಾಜ್ಯ ಮದ್ಯ ಮಾರಾಟಗಾರರ ಸಂಘವು ಇದೇ 20 ರಂದು ಕರೆ ನೀಡಿರುವ ಮದ್ಯ ಮಾರಾಟ ಬಂದ್‌ಗೆ ಬೆಂಬಲ ಇಲ್ಲ ಎಂದೂ  ಸ್ಪಷ್ಟಪಡಿಸಿದರು. 

‘ಪ್ರವಾಸೋದ್ಯಮ ಹಾಗೂ ಅಬಕಾರಿ ಇಲಾಖೆಯ ಅನುಮತಿ ಪಡೆದು ಎರಡು ಸಾವಿರಕ್ಕೂ ಅಧಿಕ ಹೋಟೆಲ್‌ಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರವಾಸೋದ್ಯಮ ಇಲಾಖೆಯಡಿಯ ಹೋಟೆಲ್ ಮತ್ತು ಬಾರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ವಾರ್ಷಿಕ ಪರವಾನಗಿ ಶುಲ್ಕವನ್ನು ಭರಿಸುತ್ತಿವೆ. ಈ ವಾರ್ಷಿಕ ಶುಲ್ಕವನ್ನು ಕಡಿಮೆ ಮಾಡಿ, ಅಬಕಾರಿ ಲಾಭಾಂಶವನ್ನು ಶೇ 10ರಿಂದ ಶೇ 20ಕ್ಕೆ ಹೆಚ್ಚಿಸಬೇಕು. ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಮದ್ಯ ಸೇವಿಸಲು ಹಾಗೂ ಊಟೋಪಚಾರ ಮಾಡಲು ದಿನದ 24 ಗಂಟೆಗಳೂ ಹೋಟೆಲ್‌ಗಳಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪ್ರವಾಸೋದ್ಯಮ ಹೋಟೆಲ್‌ಗಳನ್ನು ನಡೆಸುವವರು ಹೆಚ್ಚಿನ ಬಂಡವಾಳ ಹೂಡಿಕೆ ಮಾಡಿ, ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲದ ಬಡ್ಡಿಯನ್ನು ಕಟ್ಟಲಾರದ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ವಿದ್ಯುತ್ ಶುಲ್ಕ, ನೀರಿನ ಕರ ಹಾಗೂ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು’ ಎಂದು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.