ಬೆಂಗಳೂರು: ‘ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ 20ರಷ್ಟು ಲಾಭಾಂಶ ನೀಡಬೇಕು. ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು. ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಸಿಕ್ಕಿಬಿದ್ದ ಅಬಕಾರಿ ಅಧಿಕಾರಿಗೆ ಎಕ್ಸಿಕ್ಯುಟಿವ್ ಹುದ್ದೆ ನೀಡಬಾರದು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ಸ್ ಕರ್ನಾಟಕ’ ಪದಾಧಿಕಾರಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಸಿಎಲ್–2ಗಳಲ್ಲಿ ಗ್ರಾಹಕರಿಗೆ ಮದ್ಯ ಸೇವಿಸಲು ಅವಕಾಶ ನೀಡಬೇಕು. ಸಿಎಲ್–9 ಮತ್ತು ಸಿಎಲ್–7 ಅಥವಾ ಇತರೆ ದೊಡ್ಡ ಹೋಟೆಲ್‌ಗಳಿಗೆ ಗ್ರಾಹಕರು ತೆರಳಿ ಆಹಾರ ಪದಾರ್ಥಗಳನ್ನು ಖರೀದಿಸಲು ಆಗುವುದಿಲ್ಲ. ಆದ್ದರಿಂದ, ಗ್ರಾಹಕರಿಗೆ ಅನುಕೂಲವಾಗುವಂತೆ ಸನ್ನದು ಷರತ್ತುಗಳನ್ನು ಸಡಿಲಿಕೆ ಮಾಡಬೇಕು. ಮದ್ಯದಂಗಡಿಯ ಆವರಣದಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘2005ರಲ್ಲಿ ತಿದ್ದುಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ 29 ಅನ್ನು ಪುನರ್ ವಿಮರ್ಶಿಸಿ, ತಿದ್ದುಪಡಿ ಮಾಡಬೇಕು. ಎಂಎಸ್‌ಐಎಲ್ ಅಂಗಡಿಗಳನ್ನು ಗ್ರಾಮಾಂತರ ಭಾಗದಲ್ಲಿ ತೆರೆಯಬೇಕು. ಆದರೆ, ಈಗ ನಗರ ಪ್ರದೇಶಗಳಲ್ಲೂ ತೆರೆಯುತ್ತಿರುವುದರಿಂದ ಇತರೆ ಸನ್ನದುದಾರರಿಗೆ ನಿರೀಕ್ಷಿತ ವ್ಯಾಪಾರ–ವಹಿವಾಟು ಆಗುತ್ತಿಲ್ಲ’ ಎಂದು ಆರೋಪಿಸಿದರು.
‘ಮಿಲಿಟರಿ ಕ್ಯಾಂಟೀನ್ ಸ್ಟೋರ್‌ಗಳು, ಡ್ಯೂಟಿ ಫ್ರೀ ಹೆಸರಿನಲ್ಲಿ ಬರುವ ನಕಲಿ ಮದ್ಯ, ಗೋವಾದಿಂದ ಆಮದು ಮಾಡಿಕೊಳ್ಳುತ್ತಿರುವ ಮದ್ಯಕ್ಕೆ ಕಡಿವಾಣ ಹಾಕಬೇಕು. ನಕಲಿ ಮದ್ಯ ತಯಾರಿಕಾ ಕೇಂದ್ರಗಳನ್ನು ನಿಯಂತ್ರಿಸಿ, ಅಂಥ ಕೇಂದ್ರಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಬೇಕು. ಪೊಲೀಸ್ ಇಲಾಖೆಯವರ ಅನಗತ್ಯ ಹಸ್ತಕ್ಷೇಪ ಮತ್ತು ಮದ್ಯದಂಗಡಿಗಳನ್ನು ಬಂದ್ ಮಾಡುತ್ತಿರುವುದರ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಎಸ್. ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ, ಕೋಶಾಧಿಕಾರಿ ಟಿ.ಎಂ. ಮೆಹರ್‌ವಾಡೆ, ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗ್ಡೆ, ಜಿ. ರಾಮುಲು ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಸೋಸಿಯೇಷನ್ ಸದಸ್ಯರು ಉಪಸ್ಥಿತರಿದ್ದರು.
Highlights - ನಕಲಿ ಮದ್ಯ ತಯಾರಿಕೆ ಕೇಂದ್ರಗಳ ನಿಯಂತ್ರಣಕ್ಕೆ ಆಗ್ರಹ ಪೊಲೀಸ್ ಇಲಾಖೆ ಹಸ್ತಕ್ಷೇಪಕ್ಕೆ ಕಡಿವಾಣ: ಮನವಿ ನಗರಗಳಲ್ಲಿ ಎಂಎಸ್‌ಐಎಲ್ ಮಳಿಗೆಗಳಿಗೆ ಅವಕಾಶ ಬೇಡ: ಒತ್ತಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.