ADVERTISEMENT

ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಏನು: ಹೈಕೋರ್ಟ್‌

ಮಾಸ್ಕ್ ಕಡ್ಡಾಯದ ಬಗ್ಗೆ ಸಮಗ್ರ ಕಾರ್ಯಾಚರಣೆಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 20:20 IST
Last Updated 15 ಅಕ್ಟೋಬರ್ 2020, 20:20 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲ್ಲೇಶ್ವರಂ ತನಕ ಮಾಸ್ಕ್ ಧರಿಸದೇ ರ್‍ಯಾಲಿ ನಡೆಸಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ.

ಮಾಸ್ಕ್ ಧರಿಸದೇ ಇರುವ ಬಗ್ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಮಾಸ್ಕ್ ಧರಿಸದೆ ರ್‍ಯಾಲಿಯಲ್ಲಿ ಭಾಗವಹಿಸಿರುವ ಕುರಿತ ಚಿತ್ರಗಳನ್ನು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದನ್ನು ಆಧರಿಸಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿತು.

‘1.30 ಕೋಟಿ ಜ‌ನಸಂಖ್ಯೆ ಇರುವ ಬೆಂಗಳೂರಿನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಅಂತರ ಕಾಪಾಡಬೇಕು ಎಂಬ ನಿಯಮ ಜಾರಿಗೊಳಿಸುವ ಹೊಣೆಯನ್ನು 198 ಮಾರ್ಷಲ್‌ಗಳಿಗಷ್ಟೇ ವಹಿಸಿರುವುದು ಸಾಲದು’ ಎಂದು ಪೀಠ ಹೇಳಿತು.

ADVERTISEMENT

‘ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ನಿಯೋಜಿಸದಿದ್ದರೆ, ಈ ನಿಯಮದ ಆಶಯ ಈಡೇರುವುದಿಲ್ಲ. ಸರ್ಕಾರ ಮತ್ತು ಬಿಬಿಎಂಪಿ ತಕ್ಷಣವೇ ಕಾರ್ಯನಿರ್ವಹಿಸಬೇಕಾದ ಸಮಯ ಬಂದಿದೆ. ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರು ನಗರದಲ್ಲಿ ಸಮಗ್ರವಾಗಿ ಕಾರ್ಯಚರಣೆಗೆ ಇಳಿಯಲೇಬೇಕು’ ಎಂದು ಪೀಠ ತಿಳಿಸಿದೆ.

‘ದಂಡದ ಮೊತ್ತವನ್ನು ಹೆಚ್ಚಿಸಿ ಮತ್ತೆ ಒಂದು ವಾರದಲ್ಲಿ ಕಡಿಮೆ ಮಾಡಿದ ನಿರ್ಧಾರದ ಹಿಂದಿನ ತರ್ಕ ಏನು’ ಎಂದು ಪ್ರಶ್ನಿಸಿದ ಪೀಠ, ‘ದಂಡದ ಮೊತ್ತ ಕಡಿಮೆ ಮಾಡುವುದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಸುಧಾರಣೆ ಖಂಡಿತವಾಗಿಯೂ ಆಗುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಲಿಟ್ಜ್‌ಕಿಟ್ ಫೌಂಡೇಷನ್, ಮಾರ್ಗದರ್ಶಿ ಸೂತ್ರಗಳನ್ನು(ಎಸ್‌ಒಪಿ) ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಲು ಕೋರಿತ್ತು.

ನೋಟಿಸ್: ಪ್ರತಿಭಟನೆ ಮತ್ತು ರ್‍ಯಾಲಿಗಳನ್ನು ನಡೆಸಲು ಅವಕಾಶ ನೀಡಬಾರದು ಎಂಬ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ನೋಟಿಸ್ ನೀಡಲು ಹೈಕೋರ್ಟ್ ಆದೇಶಿಸಿತು. ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಈ ಅರ್ಜಿ ಸಲ್ಲಿಸಿದ್ದಾರೆ.

ಕೆಎಸ್‌ಒಯು ರಿಜಿಸ್ಟ್ರಾರ್ ವಿರುದ್ಧ ವಿಚಾರಣೆಗೆ ತಡೆ

ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ(ಕೆಎಸ್‌ಒಯು) ರಿಜಿಸ್ಟ್ರಾರ್ ಡಾ. ಲಿಂಗರಾಜ ಗಾಂಧಿ ವಿರುದ್ಧ ವಿಚಾರಣೆಗೆ ಹೈಕೋರ್ಟ್‌ ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ.

ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಕೆಎಸ್‌ಒಯು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಎ.ರಂಗಸ್ವಾಮಿ ಅರ್ಜಿ ಸಲ್ಲಿಸಿದ್ದರು.

‘ಎ.ರಂಗಸ್ವಾಮಿ ವಿರುದ್ಧ ವಿಚಾರಣೆ ನಡೆಯುತ್ತಿದೆ ಎಂಬ ಸುಳ್ಳು ಮಾಹಿತಿಯನ್ನು ಲಿಂಗರಾಜ ಗಾಂಧಿ ನೀಡಿದ್ದರು’ ಎಂಬ ಆರೋಪದಲ್ಲಿ ವಿಚಾರಣೆಗೆ ಏಕ ಸದಸ್ಯ ಪೀಠ ಆದೇಶಿಸಿತ್ತು. ಅದಕ್ಕೆ ತಡೆ ನೀಡಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ,
ಪ್ರತಿವಾದಿಗೆ ನೋಟಿಸ್ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.