ADVERTISEMENT

ಸಾಧಕಿ | ಬಯಾಪ್ಸಿ ಪರೀಕ್ಷೆಗೆ ನೇರಳೆ ಹಣ್ಣಿನ ಸ್ಟೈನ್‌

ರೇಷ್ಮಾ ರವಿಶಂಕರ್
Published 2 ನವೆಂಬರ್ 2019, 1:53 IST
Last Updated 2 ನವೆಂಬರ್ 2019, 1:53 IST
   

ಬೆಂಗಳೂರು:ಜೀವಕಣ, ದ್ರವಗಳನ್ನು ದೇಹದಿಂದ ಬೇರ್ಪಡಿಸಿ ರೋಗಪತ್ತೆ ಮಾಡುವ ವಿಧಾನಕ್ಕೆ (ಬಯಾಪ್ಸಿ) ತಗಲುವ ವೆಚ್ಚವನ್ನು ಶೇ 70ರಷ್ಟು ತಗ್ಗಿಸುವ ನೇರಳೆ ಹಣ್ಣಿನ ಕಲೆಯೊಂದನ್ನು (ಸ್ಟೈನ್‌) ಬೆಂಗಳೂರಿನ ಸಂಶೋಧಕಿಯೊಬ್ಬರು ಅಭಿವೃದ್ಧಿಪಡಿಸಿದ್ದಾರೆ.

ಜೀವಕಣ ಸಂಶೋಧನೆಯಲ್ಲಿ ದೇಶದ ಪ್ರಥಮ ಹಕ್ಕುಸ್ವಾಮ್ಯ ಪಡೆಯುವ ಹಂತದಲ್ಲಿ ಈ ಸಂಶೋಧನೆ ಇದ್ದು,ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್‌) ಮಟ್ಟಿಗೂ ಇದು ಪ್ರಥಮ ಹಕ್ಕುಸ್ವಾಮ್ಯ ಪ್ರಕಟಣೆಯಾಗಿ ಹೊರಹೊಮ್ಮಲಿದೆ.

ನಗರದ ಡಾ. ಬಿ. ಆರ್‌. ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನ ಸಂಶೋಧಕಿ ಡಾ. ವಸುಧಾ ಕುಲಕರ್ಣಿ ಅವರು ಈ ಸಾಧನೆ ಮಾಡಿದವರು. ಕ್ಯಾನ್ಸರ್‌ನಂತಹ ಪರೀಕ್ಷೆಗಳಲ್ಲಿ ಬಯಾಪ್ಸಿ ಪರೀಕ್ಷೆ ಬಹಳ ಮುಖ್ಯವಾದುದು. ಸದ್ಯ ಹೆಮಾಟಾಕ್ಸಿಲಿನ್‌ ಮತ್ತು ಇಒಸಿನ್‌ ಎಂಬ ಎರಡು ಸ್ಟೈನಿಂಗ್‌ ಸೆಲ್‌ಗಳನ್ನು ಬಳಸಲಾಗುತ್ತದೆ. ಇಒಸಿನ್‌ ಒಂದು ರಾಸಾಯನಿಕವಾಗಿದ್ದು, ಸಿಟೋಪ್ಲಾಸ್ಮ್‌ ಅನ್ನು ಸ್ಟೈನ್‌ ಮಾಡಲು ಬಳಸಲಾಗುತ್ತದೆ. ಜೀವಕಣದ ನ್ಯೂಕ್ಲಿಯಸ್‌ ಅನ್ನು ಸ್ಟೈನ್‌ ಮಾಡುವುದಕ್ಕೆ ಹೆಮಟಾಕ್ಸಿಲಿನ್‌ ಬಳಕೆಯಾಗುತ್ತದೆ.

ADVERTISEMENT
ಡಾ.ವಸುಧಾ ಕುಲಕರ್ಣಿ

‘ಪಾಶ್ಚಿಮಾತ್ಯ ದೇಶಗಳಲ್ಲಿ ಬೆಳೆಯುವ ಮರವೊಂದರಿಂದ ಹೆಮಟಾಕ್ಸಿಲಿನ್‌ ಬಳಸಲಾಗುತ್ತದೆ. ಇದರಿಂದಾಗಿ ಭಾರತದಲ್ಲಿ ಇದು ಬಹಳ ದುಬಾರಿ. 25 ಗ್ರಾಂಗೆ ₹2,500ರಿಂದ 5 ಸಾವಿರದ ತನಕ ದರ ಇದೆ. ಆದರೆ ನೇರಳೆ ಹಣ್ಣು ಕೆ.ಜಿ.ಗೆ ₹ 750 ರಲ್ಲೇ ನಮಗೆ ಸಿಗುತ್ತದೆ. ಹೀಗಾಗಿ ಮುಂದೆ ನೇರಳೆ ಹಣ್ಣಿನಿಂದ ಸಿದ್ಧವಾದ ಸ್ಟೈನ್‌ ಬಳಕೆ ಶುರುವಾದರೆ ಬಯಾಪ್ಸಿಗೆ ಈಗ ತಗಲುವ ₹ 9 ಸಾವಿರ ವೆಚ್ಚದಲ್ಲಿ ಶೇ 70ರಷ್ಟು ಕಡಿತ ಉಂಟಾಗಬಹುದು’ ಎಂದು ವಸುಧಾ ಕುಲಕರ್ಣಿ ಹೇಳಿದರು.

ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಕುಲಪತಿ ಡಾ. ಎಸ್‌. ಸಚ್ಚಿದಾನಂದ, ‘ಸಮುದಾಯಕ್ಕೆ ಇದನ್ನು ಹೇಗೆ ಸಮರ್ಥವಾಗಿ ಬಳಸಬಹುದು ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ಇನ್ನೂ ಐದು ಹಕ್ಕುಸ್ವಾಮ್ಯಗಳನ್ನು ಸಾಧಿಸುವ ಹಂತದಲ್ಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.