ಬೆಂಗಳೂರು: ಮಾಧ್ಯಮಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕೊರತೆ ಇನ್ನೂ ನೀಗಿಲ್ಲ ಎಂದು ವಿಶ್ವಸಂಸ್ಥೆಯ ವರ್ಣಭೇದ ನೀತಿ ಸದಸ್ಯೆ ಹಾಗೂ ಮಾನವ ಹಕ್ಕುಗಳ ತಜ್ಞೆ ಕೆ.ಪಿ. ಅಶ್ವಿನಿ ಹೇಳಿದರು.
ಕರ್ನಾಟಕ ಪತ್ರಕರ್ತೆಯರ ಸಂಘ ಗುರುವಾರ ಆಯೋಜಿಸಿದ್ದ ನಾಗಮಣಿ ಎಸ್. ರಾವ್ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ‘ಮಾಧ್ಯಮದಲ್ಲಿ ಮಹಿಳಾ ಪ್ರಾಮುಖ್ಯತೆ ಮತ್ತು ಜವಾಬ್ದಾರಿ’ ವಿಷಯ ಕುರಿತು ಮಾತನಾಡಿದರು.
ಕಳೆದ ಮೂರು ದಶಕಗಳಲ್ಲಿ ಮಾಧ್ಯಮರಂಗ ವೇಗವಾಗಿ ಬೆಳೆದಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಭಾರತೀಯ ಮಾಧ್ಯಮಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೃಪ್ತಿಕರವಾಗಿಲ್ಲ. ಅದರಲ್ಲೂ ಕೋವಿಡ್ ನಂತರದ ದಿನಗಳಲ್ಲಿ ಪತ್ರಕರ್ತೆಯರು ತಮ್ಮ ವೈಯಕ್ತಿಕ ಬದುಕು ಹಾಗೂ ವೃತ್ತಿ ಎರಡನ್ನೂ ನಿಭಾಯಿಸಲಾಗದೇ ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿಯನ್ನು ತೊರೆದಿರುವುದು ವಿಷಾದನೀಯ ಎಂದರು.
ಪತ್ರಕರ್ತೆಯರ ಮೇಲೆ ನಿರಂತರವಾಗಿ ಆನ್‌ಲೈನ್‌ನಲ್ಲಿ ದಾಳಿ ನಡೆಸಲಾಗುತ್ತಿದೆ. ಈ ಬಗ್ಗೆ ನಾನು ನಡೆಸಿದ ಅಧ್ಯಯನದಲ್ಲಿ ಶೇ 60ರಿಂದ 70ರಷ್ಟು ಪತ್ರಕರ್ತೆಯರು ತಮ್ಮ ವರದಿ, ಲೇಖನಗಳ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿ ದಾಳಿಗೊಳಗಾಗಿರುವ ಅಂಶ ಬಹಿರಂಗವಾಗಿದೆ. ಈಚೆಗಷ್ಟೇ ಡೇಟಿಂಗ್ ಆ್ಯಪ್ ಬಗ್ಗೆ ಬರೆದ ತಳಸಮುದಾಯದ ಪತ್ರಕರ್ತೆಯೊಬ್ಬರ ಮೇಲೂ ನಿರಂತರ ದಾಳಿ ನಡೆಸಲಾಗಿತ್ತು. ಆದರೆ, ಆಕೆ ಕಾರ್ಯ ನಿರ್ವಹಿಸುವ ಮಾಧ್ಯಮ ಸಂಸ್ಥೆ ಟ್ರೋಲ್ ಮಾಡುವವರಿಗೆ ಕಾನೂನು ಸಮರದ ಎಚ್ಚರಿಕೆ ನೀಡಿದ ಮೇಲಷ್ಟೇ ಅದು ನಿಂತಿತು. ಈ ರೀತಿಯ ಬೆಂಬಲದ ವಾತಾವರಣ ಎಲ್ಲ ಮಾಧ್ಯಮ ಸಂಸ್ಥೆಗಳಲ್ಲೂ ಇರಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆಯರಾದ ಆರ್. ಪೂರ್ಣಿಮಾ, ಎಚ್.ಎಲ್. ಸೀತಾದೇವಿ, ಎಚ್.ಎನ್. ಆರತಿ, ಶಾಂತಕುಮಾರಿ ಕೆ., ಭಾರತಿ ಹೆಗಡೆ, ರಶ್ಮಿ ಎಸ್., ಮಂಜುಳಾ ಕಿರುಗಾವಲು, ಮಂಜುಳಾ ಹುಲಿಕುಂಟೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ವಿ.ಟಿ. ರಾಜಶೇಖರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ದತ್ತಿನಿಧಿ ಸ್ಥಾಪಕಿ ನಾಗಮಣಿ ಎಸ್.ರಾವ್, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.