ADVERTISEMENT

ಸ್ವಚ್ಛತೆ ಕಾಪಾಡಲು ನೆರವಾದ ಮಹಿಳೆಯರಿಗೆ ಅಭಿನಂದನೆ

ನಗರದ ಸ್ವಚ್ಛತೆ– ಜನ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 20:58 IST
Last Updated 7 ಮಾರ್ಚ್ 2021, 20:58 IST
ಮುಟ್ಟಿನ ಸಂದರ್ಭದಲ್ಲಿ ಸ್ರಾವ ನಿಯಂತ್ರಣಕ್ಕೆ ನೈರ್ಮಲ್ಯ ಪ್ಯಾಡ್ ಬದಲು ಬಳಸುವ ಸುಸ್ಥಿರ ಕಪ್‌ಗಳನ್ನು ಸ್ಟೋನ್ ಸೂಪ್ ಸಂಸ್ಥೆಯ ಸ್ವಯಂಸೇವಕರು ಪೌರಕಾರ್ಮಿಕರಿಗೆ ವಿತರಿಸಿದರು. –ಪ್ರಜಾವಾಣಿ ಚಿತ್ರ
ಮುಟ್ಟಿನ ಸಂದರ್ಭದಲ್ಲಿ ಸ್ರಾವ ನಿಯಂತ್ರಣಕ್ಕೆ ನೈರ್ಮಲ್ಯ ಪ್ಯಾಡ್ ಬದಲು ಬಳಸುವ ಸುಸ್ಥಿರ ಕಪ್‌ಗಳನ್ನು ಸ್ಟೋನ್ ಸೂಪ್ ಸಂಸ್ಥೆಯ ಸ್ವಯಂಸೇವಕರು ಪೌರಕಾರ್ಮಿಕರಿಗೆ ವಿತರಿಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಪೌರಕಾರ್ಮಿಕರು, ಆಶಾ ಕಾರ್ಯಕರ್ತರು ಹಾಗೂ ಸಂಪರ್ಕ ಕಾರ್ಯಕರ್ತೆಯರು ಸೇರಿದಂತೆ ಸುಮಾರು 200 ಮಂದಿಯನ್ನು ಗೌರವಿಸಲಾಯಿತು.

ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021 ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿನಗರದ ಒರಾಯನ್‌ ಮಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನೆರವಾಗಿರುವ ಮಹಿಳೆಯರಿಗೆ 'ಸ್ವಚ್ಛತಾ ಷಿ ಚಾಂಪಿಯನ್‌’ ಅಭಿನಂದನಾಪತ್ರಗಳನ್ನು ವಿತರಿಸಲಾಯಿತು.

ನಗರದ ಸ್ವಚ್ಛತೆ ಕಾಪಾಡುವ ಬಗ್ಗೆ ಜನಜಾಗೃತಿ ಮೂಡಿಸಲಾಯಿತು. ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸದಿಂದ ಕಾಂಪೋಸ್ಟ್‌ ತಯಾರಿಸುವ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಯಿತು. ನಗರದ ಸ್ವಚ್ಛತೆ ಕಾಪಾಡಲು ದುಡಿಯುತ್ತಿರುವ ಪೌರಕಾರ್ಮಿಕರು ಮತ್ತು ಆರೋಗ್ಯದ ಅರಿವು ಮೂಡಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.

ADVERTISEMENT

ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಸ್ರಾವ ನಿಯಂತ್ರಣಕ್ಕೆ ನೈರ್ಮಲ್ಯ ಪ್ಯಾಡ್‌ಗಳ ಬದಲು ‘ಸುಸ್ಥಿರ ಮುಟ್ಟಿನ ಕಪ್‌’ ಬಳಕೆ ಮಾಡುವ ಬಗ್ಗೆ ಸ್ಟೋನ್‌ ಸೂಪ್‌ ಸಂಸ್ಥೆಯ ( Stonesoup.in) ಸ್ವಯಂಸೇವಕರು ಜಾಗೃತಿ ಮೂಡಿಸಿದರು. ಕಪ್‌ ಬಳಕೆಯಿಂದ ನೈರ್ಮಲ್ಯ ಪ್ಯಾಡ್‌ಗಳ ಅವೈಜ್ಞಾನಿಕ ವಿಲೇವಾರಿಯಿಂದ ಉಂಟಾಗುವ ಮಾಲಿನ್ಯದ ಬಗ್ಗೆಯೂ ಮಹಿಳೆಯರಿಗೆ ತಿಳಿವಳಿಕೆ ನೀಡಿದರು.

ಬಿಬಿಎಂಪಿ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್‌ ಹಾಗೂ ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ ಉಪಸ್ಥಿತರಿದ್ದರು.

‘ಕೋವಿಡ್‌ ಯೋಧರಿಗೆ ಸುಸ್ಥಿರ ಕಪ್‌’
ಕೋವಿಡ್‌ ಯೋಧರಾಗಿ ಕಾರ್ಯನಿರ್ವಹಿಸಿರುವ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು ಹಾಗೂ ಸಂಪರ್ಕ ಕಾರ್ಯಕರ್ತರು ಸೇರಿ 100 ಮಹಿಳೆಯರಿಗೆ ಮುಟ್ಟಿನ ವೇಳೆ ಬಳಸುವ ಸುಸ್ಥಿರ ಕಪ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

ಐವರು ಬಾಲಕಿಯರು‘ಕೋವಿಡ್‌ ಯೋಧರಿಗೆ ಸುಸ್ಥಿರ ಕಪ್‌’ ಅಭಿಯಾನ ನಡೆಸುತ್ತಿದ್ದಾರೆ. ದೇಣಿಗೆ ಸಂಗ್ರಹಿಸಿ ಕೋವಿಡ್‌ ಯೋಧರಿಗೆ ಉಚಿತವಾಗಿ ಕಪ್‌ ವಿತರಿಸುತ್ತಿದ್ದಾರೆ. ಸುಸ್ಥಿರ ಕಪ್‌ ಬಳಕೆಯ ಜಾಗೃತಿ ಮೂಡಿಸುವ ‘ಸ್ಟೋನ್‌ ಸೂಪ್‌’ ಸಂಸ್ಥೆ ಇದಕ್ಕೆ ನೆರವಾಗುತ್ತಿದೆ.

‘ಸರಿಯಾಗಿ ವಿಲೇವಾರಿಯಾಗದ ನೈರ್ಮ್ಯಲ್ಯ ಪ್ಯಾಡ್‌ ನೂರಾರು ವರ್ಷ ಭೂಮಿಯಲ್ಲಿ ಉಳಿದುಬಿಡುತ್ತದೆ. ರಾಸಾಯನಿಕಲೇಪಿತ ಪ್ಯಾಡ್‌ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಯನ್ನೂ ಸೃಷ್ಟಿಸುತ್ತದೆ. ಪ್ಯಾಡ್‌ಗಳಿಗಾಗಿ ಮಹಿಳೆ ತಿಂಗಳಿಗೆ ₹ 50ರಿಂದ ₹ 300 ವೆಚ್ಚ ಮಾಡಬೇಕಾಗುತ್ತದೆ. ಬಡವರಿಗೆ ಇದು ಆರ್ಥಿಕ ಹೊರೆ’ ಎಂದು ಸ್ಟೋನ್‌ ಸೂಪ್ ಸಂಸ್ಥೆಯ ಎಸ್‌.ಪದ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರು ಮನೆಯ ಕಸದ ಜೊತೆಯೇ ಬಳಸಿದ ನೈರ್ಮಲ್ಯ ಪ್ಯಾಡ್‌ಗಳನ್ನೂ ನೀಡುತ್ತಾರೆ. ಪೌರಕಾರ್ಮಿಕರು ಇವುಗಳನ್ನು ಕೈಯಿಂದ ಮುಟ್ಟಬೇಕಾಗುತ್ತದೆ. ಇದು ಮಲಹೊರುವ ಪದ್ಧತಿಯ ಮುಂದುವರಿದ ಭಾಗದಂತೆ’ ಎಂದು ಅವರು ಟೀಕಿಸಿದರು.

‘ಸುಸ್ಥಿರ ಕಪ್‌ ಅನ್ನು 10 ವರ್ಷ ಬಳಸಬಹುದು. ಪ್ರತಿ ಕಪ್‌ಗೆ ₹ 300ರಿಂದ ₹ 1 ಸಾವಿರದವರೆಗೆ ದರವಿದೆ. ದೀರ್ಘಾವಧಿ ಪ್ರಯೋಜನ ಪರಿಗಣಿಸಿದರೆ ಇದು ದುಬಾರಿ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.