ಬೆಂಗಳೂರು: ‘ಮೈಕ್ರೊ ಫೈನಾನ್ಸ್ ಕಂಪನಿಗಳು ಕಿರು ಸಾಲದ ನೆಪದಲ್ಲಿ ಮಹಿಳೆಯರನ್ನು ಶೋಷಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರವು ಸೂಕ್ತ ನಿಯಮಾವಳಿಗಳನ್ನು ಜಾರಿಗೆ ತರಬೇಕು’ ಎಂದು ಮೈಕ್ರೊ ಫೈನಾನ್ಸ್ ಅಕ್ರಮ ವಿರೋಧಿ ಮಹಿಳಾ ವೇದಿಕೆ ಆಗ್ರಹಿಸಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ವಿ. ಗಾಯತ್ರಿ, ‘ಮೈಕ್ರೊ ಫೈನಾನ್ಸ್ ಕಂಪನಿಗಳು ಹಳ್ಳಿ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿನಿತ್ಯ ಹೊಸ ಹೊಸ ಕಂಪನಿಗಳು ತಲೆಯೆತ್ತುತ್ತಿವೆ. ಗ್ರಾಮೀಣ ಹಾಗೂ ನಗರದ ಬಡ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ನೆಪದಲ್ಲಿ ಅವರನ್ನು ಸಾಲದಲ್ಲಿ ಮುಳುಗಿಸಿ, ಆರ್ಥಿಕ ಸಂಕಷ್ಟಕ್ಕೆ ನೂಕಲಾಗುತ್ತಿದೆ’ ಎಂದು ಆರೋಪಿಸಿದರು.
‘ಬಡ ಮಹಿಳೆಯರಿಗೆ ಹಾಗೂ ಭೂ ರಹಿತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ವಿಚಾರದಲ್ಲಿ ಸರ್ಕಾರ ಹಿಂದೆ ಮುಂದೆ ನೋಡುತ್ತಿರುವಾಗ ಸ್ವಯಂ ಸೇವಾ ಸಂಸ್ಥೆಗಳು ಮಹಿಳೆಯರನ್ನು ಒಗ್ಗೂಡಿಸಿದವು. ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಬಲಗೊಳಿಸಲು ಹೊರಟಿದ್ದ ಪ್ರಯತ್ನಗಳನ್ನು ಮೈಕ್ರೊ ಫೈನಾನ್ಸ್ ಅಥವಾ ಕಿರು ಸಾಲ ಯೋಜನೆಗಳು ತಲೆಕೆಳಗೆ ಮಾಡಿದವು. ಹಣ ಮರುಪಾವತಿಗೆ ಸಂಬಂಧಿಸಿದಂತೆ ಮಹಿಳೆಯರನ್ನು ಬಹಿರಂಗವಾಗಿ ಅವಮಾನಿಸಲಾಗುತ್ತಿದೆ. ಈ ಕಂಪನಿಗಳಿಗೆ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಡಿವಾಣ ಹಾಕುವವರೆಗೂ ನಾವು ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.
ಲೇಖಕಿ ವಿಜಯಾ, ‘ಒಂದು ಕಾಲದಲ್ಲಿ ಗ್ರಾಮೀಣ ಮಹಿಳೆಯರಲ್ಲಿ ಧೈರ್ಯ, ಸಂಘಟನೆ ಹುಟ್ಟು ಹಾಕಿದ್ದೇವು. ಬ್ಯಾಂಕುಗಳಲ್ಲಿ ಹಣ ಇಡುವಷ್ಟು ಮಹಿಳೆಯರು ಸಶಕ್ತರಾಗಿದ್ದರು. ಮೈಕ್ರೊ ಫೈನಾನ್ಸ್ ಕಂಪನಿಗಳು ಕಿರು ಸಾಲದ ಮೂಲಕ ಮಹಿಳೆಯರ ಒಗ್ಗಟ್ಟನ್ನು ಒಡೆದಿದೆ. ಹೆಚ್ಚಿನ ಮಹಿಳೆಯರು ಸಾಲದಿಂದ ಹೊರಬರಲಾಗದೆ ದಿಕ್ಕೆಟ್ಟಿದ್ದಾರೆ. ಮೈಕ್ರೊ ಫೈನಾನ್ಸ್ ಕಂಪನಿಗಳು ಬಡತನವನ್ನು ನೀಗಿಸಿಲ್ಲ, ಮಹಿಳೆಯರನ್ನು ಸಬಲರನ್ನಾಗಿಯೂ ಮಾಡಿಲ್ಲ. ಹೆಗಲ ಮೇಲೆ ಶಾಶ್ವತವಾಗಿ ಸಾಲದ ಹೊರೆ ಹೊರಿಸಲಾಗಿದೆ. ಈಗ ಸಾಲದಿಂದ ರೈತ ಮಹಿಳೆಯರು ಸಾವಿಗೆ ಒಳಗಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.