ಬೆಂಗಳೂರು: ಜೈನ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ‘ಜೆಯು ಸಿನಿಮೇಟ್ಸ್ 2.0’ ಡಿಕೋಡಿಂಗ್ ಕಾರ್ಯಕ್ರಮಕ್ಕೆ ಚಲನಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ ಅವರು ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘48 ಗಂಟೆಯೊಳಗೆ ಕಿರುಚಿತ್ರ ನಿರ್ಮಿಸುವುದು ವಿನೂತನ ಪರಿಕಲ್ಪನೆ. ಇದರಲ್ಲಿ ಸಾಕಷ್ಟು ಯೋಜನೆ, ಸೃಜನಶೀಲತೆ ಮತ್ತು ತಾಂತ್ರಿಕ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದರು.
ಜೈನ್ ವಿಶ್ವವಿದ್ಯಾಲಯದ ಸಹಕುಲಪತಿ ದಿನೇಶ್ ನೀಲಕಂಠ್ ಮಾತನಾಡಿ, ‘ನವರಸ ಪರಿಕಲ್ಪನೆ ಅಡಿಯಲ್ಲಿ ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿತ್ತು. ಒಂದು ಕಥೆ ಪ್ರೇಕ್ಷಕರ ಭಾವನೆಗಳನ್ನು ಜಾಗೃತಗೊಳಿಸುವುದರ ಜೊತೆಗೆ ಕಲ್ಪನಾಶಕ್ತಿಗೆ ಜೀವ ನೀಡಲಿದೆ. ಇದರಿಂದ, ಕಲಾವಿದರು ತಮ್ಮ ಪ್ರೇಕ್ಷಕರೊಂದಿಗೆ ಆಳವಾದ ಸಂಬಂಧ ಹೊಂದಬಹುದು. ವಿದ್ಯಾರ್ಥಿಗಳು ಚಲನಚಿತ್ರ ನಿರ್ಮಾಪಕರು, ಕಥೆಗಾರರು ಮತ್ತು ಚಲನಚಿತ್ರಕಾರರಾಗಲು ಸಿನಿಮೇಟ್ಸ್ ಒಂದು ಉತ್ತಮ ವೇದಿಕೆಯಾಗಿದೆ’ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾದ ಮುಖ್ಯಸ್ಥೆ ಭಾರ್ಗವಿ ಡಿ. ಹೆಮ್ಮಿಗೆ ಮಾತನಾಡಿ, ‘ಈ ಸ್ಪರ್ಧೆಯಲ್ಲಿ 40ಕ್ಕೂ ಕಿರುಚಿತ್ರಗಳು ಪಾಲ್ಗೊಂಡಿದ್ದವು. ಅದರಲ್ಲಿ ವಿಐಟಿ ಚೆನ್ನೈನ ‘ಜೀವಂ’ ಕಿರುಚಿತ್ರ ಮೊದಲ ಸ್ಥಾನ ಪಡೆದರೆ, ಅಮೃತ ವಿಶ್ವವಿದ್ಯಾಪೀಠಂನ ‘ದಿ ಮರ್ಮುರರ್ಸ್ ಮಾಸ್ಕ್’ ಕಿರುಚಿತ್ರವು ದ್ವಿತೀಯ ಸ್ಥಾನ ಪಡೆಯಿತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.