ಬೆಂಗಳೂರು: ಏಳು ವರ್ಷದ ಹಿಂದೆ ಆರಂಭವಾಗಿ ನಿಧಾನಗತಿಯಲ್ಲಿದ್ದ ಈಜಿಪುರ ‘ಎಲಿವೇಟಡ್ ಕಾರಿಡಾರ್’ ಕಾಮಗಾರಿ ಎರಡು ವರ್ಷ ಸ್ಥಗಿತಗೊಂಡಿತ್ತು. ಹೊಸ ಗುತ್ತಿಗೆದಾರರು ಬಂದಮೇಲೂ ಪ್ರಗತಿ ಕಾಣದ ಕಾಮಗಾರಿ, ಮುಖ್ಯಮಂತ್ರಿಯವರ ಸೂಚನೆಯಿಂದ ಚುರುಕು ಪಡೆದುಕೊಂಡಿದೆ.
ಕೋರಮಂಗಲ, ಈಜಿಪುರ, ಸೇಂಟ್ಸ್ ಜಾನ್ಸ್ ಆಸ್ಪತ್ರೆ ಸುತ್ತಮುತ್ತಲ ಪ್ರದೇಶದಲ್ಲಿ 2017ರಿಂದ ವಾಹನ ದಟ್ಟಣೆ ಅನುಭವಿಸುತ್ತಿದ್ದ ಜನರು, ಮೇಲ್ಸೇತುವೆ ಕೆಲಸ ಬೇಗ ನಡೆಯಬೇಕೆಂದು ಆಗಾಗ್ಗೆ ಒತ್ತಾಯಿಸುತ್ತಲೇ ಇದ್ದರು. ಆದರೆ, ಗುತ್ತಿಗೆದಾರರ ಬದಲಾವಣೆ, ಸ್ಥಳೀಯ ಸಮಸ್ಯೆಗಳು ಕಾಮಗಾರಿಯ ವೇಗವನ್ನು ತಡೆದವು. ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಕಟ್ಟಪ್ಪಣೆ ಮಾಡಿದ್ದರಿಂದ, ಬಿಬಿಎಂಪಿ ಎಂಜಿನಿಯರ್‌ಗಳು ಕೆಲಸ ಮಾಡಲು ಆರಂಭಿಸಿದರು.
‘ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿಯನ್ನು ಮುಗಿಸಲು ಸಾಕಷ್ಟು ಬಾರಿ ಸಚಿವರು, ಸ್ಥಳೀಯ ಶಾಸಕರೂ ಆದ ರಾಮಲಿಂಗಾರೆಡ್ಡಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ಕಾಮಗಾರಿ ಸ್ಥಗಿತಗೊಂಡಿತ್ತು. ರಾಮಲಿಂಗಾರೆಡ್ಡಿ ಅವರೂ ನಮ್ಮೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸಿದ್ದರು. ಇದೀಗ ಕಾಮಗಾರಿ ವೇಗ ಪಡೆದುಕೊಂಡಿದೆ’ ಎಂದು ಸ್ಥಳೀಯ ನಿವಾಸಿಗಳ ಸಂಘ ಸಂಸ್ಥೆಗಳು ಸದಸ್ಯರು ಹೇಳಿದರು.
‘ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದ ವಾಹನ ದಟ್ಟಣೆ ಅತಿಯಾಗಿದೆ. ಆಸ್ಪತ್ರೆ, ಶಾಲೆ–ಕಾಲೇಜು, ಕಚೇರಿಗಳಿಗೆ ಹೋಗಲು ಸಮಸ್ಯೆಯಾಗುತ್ತದೆ. ನಿಗದಿತ ಅವಧಿಗೂ ಮುನ್ನ, ಬಿಬಿಎಂಪಿ ಎಂಜಿನಿಯರ್‌ಗಳು ಕಾಮಗಾರಿ ಮುಗಿಸಲಿ’ ಎಂದು ಈಜಿಪುರ ರಾಮರಾಜು ಒತ್ತಾಯಿಸಿದರು.
ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ (ಈಜಿಪುರ) ಎಲಿವೇಟೆಡ್ ಕಾರಿಡಾರ್ 2.5 ಕಿ.ಮೀ. ಉದ್ದದ ಮೇಲ್ಸೇತುವೆಯಾಗಿದೆ. ಪುರಭವನದಿಂದ ಸಿರ್ಸಿ ವೃತ್ತದವರೆಗಿನ ಮೇಲ್ಸೇತುವೆಯ ನಂತರ ನಗರದೊಳಗಿನ ಅತಿ ಉದ್ದದ ಮೇಲ್ಸೇತುವೆ ಇದಾಗಿದೆ. ಈಜಿಪುರ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು 2014ರಲ್ಲಿ ರೂಪಿಸಲಾಗಿತ್ತು. 2017ರಲ್ಲಿ ₹157.66 ಕೋಟಿಗೆ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 2019ರೊಳಗೆ ಯೋಜನೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಗುತ್ತಿಗೆದಾರರು ವಿಳಂಬ ಮಾಡಿದರು.
ಹೈಕೋರ್ಟ್‌ಗೆ ಆದಿನಾರಾಯಣ ಶೆಟ್ಟಿ ಎಂಬುವವರು ರಿಟ್ ಸಲ್ಲಿಸಿದರು. ನಾಲ್ಕು ವರ್ಷ ಏಳು ತಿಂಗಳಾದರೂ ಶೇ 42ರಷ್ಟು ಮಾತ್ರ ಕಾಮಗಾರಿ ಮುಗಿದಿತ್ತು. ₹75.11 ಕೋಟಿ ಹಣವನ್ನೂ ಅವರಿಗೆ ಪಾವತಿಸಲಾಗಿತ್ತು. ಹೈಕೋರ್ಟ್ ಗುತ್ತಿಗೆಯನ್ನು 2022ರಲ್ಲಿ ರದ್ದು ಮಾಡಿತು. ಮೂರು ತಿಂಗಳಲ್ಲಿ ಹೊಸ ಟೆಂಡರ್ ಕರೆಯಲು ಸೂಚಿಸಿತು.
ಬಿಬಿಎಂಪಿಯ ವಿಳಂಬ ನೀತಿಯಿಂದ ಟೆಂಡರ್ ಆಹ್ವಾನ ನಿಧಾನವಾಯಿತು. ಅರ್ಧಕ್ಕೆ ನಿಂತ ಕೆಲಸವನ್ನು ಮುಂದುವರಿಸಲು ಸಾಕಷ್ಟು ಗುತ್ತಿಗೆದಾರರು ಆಸಕ್ತಿ ತೋರಲಿಲ್ಲ. ನಾಲ್ಕನೇ ಬಾರಿಗೆ ಆಹ್ವಾನಿಸಲಾಗಿದ್ದ ಟೆಂಡರ್ ಅನ್ನು 2023ರ ಮಾರ್ಚ್‌ನಲ್ಲಿ ಒಪ್ಪಿಗೆ ನೀಡಲಾಗಿತ್ತು. ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿ, ಅದನ್ನು ಆಗಸ್ಟ್‌ನಲ್ಲಿ ಸಚಿವ ಸಂಪುಟದ ಅನುಮೋದನೆಗೆ ಸಲ್ಲಿಸಲಾಗಿತ್ತು. ಸೆಪ್ಡೆಂಬರ್ 7ರಂದು ಅನುಮೋದನೆ ದೊರೆತರೂ, ₹176.11 ಕೋಟಿಗೆ ಬಿಎಸ್‌ಸಿಪಿಎಲ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯೊಂದಿಗೆ ‘ಟರ್ನ್ ಕೀ ಲಂಪ್‌ಸಮ್’ ಗುತ್ತಿಗೆಯ ಒಪ್ಪಂದವನ್ನು ನವೆಂಬರ್ 17ರಂದು ಮಾಡಿಕೊಂಡು ಕಾರ್ಯಾದೇಶ ನೀಡಲಾಗಿದೆ.
ಗುತ್ತಿಗೆ ರದ್ದು, ಹೊಸ ಟೆಂಡರ್, ಹೊಸ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಪ್ರಕ್ರಿಯೆಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ವಿಳಂಬದಿಂದ ಈಜಿಪುರ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿದೆ. ಈಗಲಾದರೂ ಕ್ಷಿಪ್ರವಾಗಿ ಕಾಮಗಾರಿ ನಡೆಸಲಿ ಎಂಬುದು ಸ್ಥಳೀಯರ ಆಗ್ರಹ.
ಸಮಸ್ಯೆಗಳು ನಿವಾರಣೆಯಾಗಿವೆ: ರಾಮಲಿಂಗಾರೆಡ್ಡಿ
‘ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಭೂಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳಿದ್ದವು. ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದ್ದು ಬೇಗ ಪೂರ್ಣಗೊಳಿಸಲು ಸೂಚಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.