ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಇದೇ 29ರಿಂದ ಅ.1ರವರೆಗೆ ‘ವಿಶ್ವ ಸಾಂಸ್ಕೃತಿಕ ಉತ್ಸವ’ವನ್ನು ಅಮೆರಿಕದ ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್‌ನಲ್ಲಿ ಹಮ್ಮಿಕೊಂಡಿದೆ.
ಸಂಸ್ಥೆಯ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ನೇತೃತ್ವದಲ್ಲಿ ಈ ಉತ್ಸವ ನಡೆಯಲಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಡಾ. ವಿವೇಕ್ ಮೂರ್ತಿ, ಅಮೆರಿಕದ ಸಂಸದರಾದ ರಿಕ್ ಸ್ಕಾಟ್, ನ್ಯಾನ್ಸಿ ಪೆಲೋಸಿ ಮುಖ್ಯಭಾಷಣಕಾರರಾಗಿ ಭಾಗವಹಿಸಲಿದ್ದಾರೆ. 17 ಸಾವಿರ ಕಲಾವಿದರು, 100ಕ್ಕೂ ಹೆಚ್ಚು ದೇಶಗಳ ಚಿಂತಕರು ಹಾಗೂ 2 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ.
‘ಜಗತ್ತಿನ ಎಲ್ಲಾ ಜನರ ಸಂಸ್ಕೃತಿಯನ್ನು ಒಗ್ಗೂಡಿಸುವ ವೇದಿಕೆ ಇದಾಗಿದೆ. ನಮ್ಮ ನಡುವಿನ ತಡೆಗೋಡೆಗಳನ್ನು ಇಲ್ಲವಾಗಿಸಿ, ಜಾತಿ, ಧರ್ಮಗಳ ಗಡಿಯನ್ನು ಮೀರುವಂತೆ ಮಾಡುವ ಚೇತೋಹಾರಿಯಾದ ಸಂಗೀತ, ನೃತ್ಯ ಮತ್ತು ವಿವಿಧ ಕಲೆಗಳಲ್ಲಿ ಮಿಂದೇಳುವ ಅವಕಾಶ ಇರಲಿದೆ. ವಿಶ್ವದ ಎಲ್ಲಾ ನಾಯಕರು ಐಕ್ಯತೆ, ಸಾಮರಸ್ಯ, ಸಹಕಾರ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಕುರಿತು ತಮ್ಮ ಉದ್ದೇಶಗಳನ್ನು ಹಂಚಿಕೊಳ್ಳುತ್ತಾರೆ’ ಎಂದು ಆಯೋಜಕರು ತಿಳಿಸಿದ್ದಾರೆ.
2006ರಲ್ಲಿ ಪ್ರಾರಂಭ: ವಿಶ್ವ ಸಾಂಸ್ಕೃತಿ ಉತ್ಸವವನ್ನು 2006ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. 2011ರಲ್ಲಿ ಜರ್ಮನಿಯ ಬರ್ಲಿನ್ ನಗರದಲ್ಲಿ ನಡೆಸಲಾಗಿತ್ತು. ಆಗ ಈ ಉತ್ಸವದಲ್ಲಿ 151 ದೇಶಗಳು ಪಾಲ್ಗೊಂಡು, ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಧ್ಯಾನ ಮಾಡಲಾಗಿತ್ತು. 2016ರಲ್ಲಿ ದೆಹಲಿಯಲ್ಲಿ ಮೂರನೇ ಉತ್ಸವ ನಡೆದಿತ್ತು ಎಂದು ಸಂಸ್ಥೆ ಹೇಳಿದೆ.
‘ವಿಭಿನ್ನ ಗುಣವಿಶೇಷಗಳಿಂದ ಕೂಡಿ, ಖಿನ್ನತೆಗೆ ಒಳಗಾಗಿರುವ ಹಾಗೂ ವಿವಿಧ ವರ್ಗಗಳ ಜನರಿಂದ ಕೂಡಿರುವ ಈ ಪ್ರಪಂಚದಲ್ಲಿ ಎಲ್ಲರೂ ಒಂದಾಗಿ ಸೇರಿ, ಈ ಭೂಗ್ರಹದ ಸಂಪದ್ಭರಿತ ವೈವಿಧ್ಯವನ್ನು ಸಂಭ್ರಮಿಸುವ ಸಮಯ ಒದಗಿ ಬಂದಿದೆ. ‘ವಸುದೈವ ಕುಟುಂಬಕಂ’ ಎಂಬ ಹೇಳಿಕೆಗೆ ಅನುಸಾರವಾಗಿ ಜೀವಿಸುವ ಸಮಯವು ಇದಾಗಿದೆ’ ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.
‘ಪ್ರಶಾಂತತೆ ಮತ್ತು ಐಕ್ಯತೆಯನ್ನು ಉದ್ದೀಪಿಸುವ ಸಾಮೂಹಿಕ ಧ್ಯಾನ ಮತ್ತು ವಿವಿಧ ಧಾರ್ಮಿಕ ಶ್ರದ್ಧೆ ಹಾಗೂ ಪ್ರಾರ್ಥನೆಗಳ ಮೂಲಕ ಒಂದು ವಿಶಿಷ್ಟ ಅನುಭವವನ್ನು ಪಡೆದುಕೊಳ್ಳಬಹುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.