ADVERTISEMENT

ನೃತ್ಯ ಸಾಂಸ್ಕೃತಿಕ ಜಗತ್ತಿನ ಅವಿಭಾಜ್ಯ ಅಂಗ: ಮೋದಾ ದೇವಿ ಒಡೆಯರ್

ಲಕ್ಷ್ಮಿ ಗೋಪಾಲಸ್ವಾಮಿಗೆ ‘ಸೃಷ್ಟಿ ರಾಷ್ಟ್ರೀಯ ನೃತ್ಯ ಪರಿಣತಿ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 1 ಮೇ 2024, 16:03 IST
Last Updated 1 ಮೇ 2024, 16:03 IST
ಕಾರ್ಯಕ್ರಮದಲ್ಲಿ ಲಕ್ಷ್ಮಿ ಗೋಪಾಲಸ್ವಾಮಿ ಅವರಿಗೆ ‘ಸೃಷ್ಟಿ ರಾಷ್ಟ್ರೀಯ ನೃತ್ಯ ಪರಿಣತಿ ಪ್ರಶಸ್ತಿ’ಯನ್ನು ಪ್ರಮೋದಾದೇವಿ ಒಡೆಯರ್ ಪ್ರದಾನ ಮಾಡಿದರು. ರೋಟರಿ 3191 ಜಿಲ್ಲೆಯ ಗವರ್ನರ್‌ ಉದಯ ಕುಮಾರ್ ಭಾಸ್ಕರ, ಪದ್ಮ ಶಿವಶಂಕರ್, ರೋಟರಿ ಸಂಸ್ಥೆಯ ವಚನ್ ಸುಂಕು, ಎ.ವಿ. ಸತ್ಯನಾರಾಯಣ ಹಾಗೂ ರೋಟರಿ ಸಂಸ್ಥೆಯ ಲೋಕನಾಥ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಲಕ್ಷ್ಮಿ ಗೋಪಾಲಸ್ವಾಮಿ ಅವರಿಗೆ ‘ಸೃಷ್ಟಿ ರಾಷ್ಟ್ರೀಯ ನೃತ್ಯ ಪರಿಣತಿ ಪ್ರಶಸ್ತಿ’ಯನ್ನು ಪ್ರಮೋದಾದೇವಿ ಒಡೆಯರ್ ಪ್ರದಾನ ಮಾಡಿದರು. ರೋಟರಿ 3191 ಜಿಲ್ಲೆಯ ಗವರ್ನರ್‌ ಉದಯ ಕುಮಾರ್ ಭಾಸ್ಕರ, ಪದ್ಮ ಶಿವಶಂಕರ್, ರೋಟರಿ ಸಂಸ್ಥೆಯ ವಚನ್ ಸುಂಕು, ಎ.ವಿ. ಸತ್ಯನಾರಾಯಣ ಹಾಗೂ ರೋಟರಿ ಸಂಸ್ಥೆಯ ಲೋಕನಾಥ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಾಸ್ತ್ರೀಯ ನೃತ್ಯವು ಸಾಂಸ್ಕೃತಿಕ ಜಗತ್ತಿನ ಅವಿಭಾಜ್ಯ ಅಂಗ. ಈ ಕಲಾ ಪ್ರಕಾರವನ್ನು ರಾಜ ಮಹಾರಾಜರ ಕಾಲದಿಂದಲೂ ಪ್ರೋತ್ಸಾಹಿಸುತ್ತಾ ಬರಲಾಗಿದೆ’ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ತಿಳಿಸಿದರು. 

ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ ನಗರದಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ನೃತ್ಯ ದಿನಾಚರಣೆ, ಮಾಯಾರಾವ್ ಸ್ಮರಣಾರ್ಥ ಕಥಕ್ ಉತ್ಸವದಲ್ಲಿ ಕಲಾವಿದೆ ಲಕ್ಷ್ಮಿ ಗೋಪಾಲಸ್ವಾಮಿ ಅವರಿಗೆ ‘ಸೃಷ್ಟಿ ರಾಷ್ಟ್ರೀಯ ನೃತ್ಯ ಪರಿಣತಿ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. 

‘ನೃತ್ಯದ ಬಗ್ಗೆ ವಿವಿಧ ಶಾಸನಗಳಲ್ಲಿಯೂ ಉಲ್ಲೇಖಿಸಲಾಗಿದೆ. ಸ್ವಾತಂತ್ರ್ಯ ದೊರೆತ ಬಳಿಕ ಸಂಘ–ಸಂಸ್ಥೆಗಳು ನೃತ್ಯ ಸೇರಿ ವಿವಿಧ ಕಲಾ ಪ್ರಕಾರವನ್ನು ಪ್ರೋತ್ಸಾಹಿಸಿ, ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುತ್ತಿವೆ. ಇದು ಶ್ಲಾಘನೀಯ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತಪ‍ಡಿಸಿದರು. 

ADVERTISEMENT

ಸೃಷ್ಟಿ ಅಭಿನಯ ಕಲಾವಿದರ ಕೇಂದ್ರದ ನಿರ್ದೇಶಕ ಎ.ವಿ. ಸತ್ಯನಾರಾಯಣ, ‘ನೃತ್ಯವು ಮನರಂಜನೆ ಮಾತ್ರವಾಗಿರದೆ, ಅಷ್ಟಾಂಗ ಸೇವೆಯಲ್ಲಿ ಒಂದಾಗಿದೆ. ನಮ್ಮ ಸಂಸ್ಕೃತಿಯಲ್ಲಿಯೇ ನೃತ್ಯ ಇದೆ. ಹೋಳಿ, ಗಣೇಶ ಹಬ್ಬ ವಿವಿಧ ಸಂದರ್ಭದಲ್ಲಿ ನೃತ್ಯ ಕಾಣಬಹುದಾಗಿದ್ದು, ಈ ಕಲಾ ಪ್ರಕಾರ ಜೀವನದ ಅವಿಭಾಜ್ಯ ಅಂಗವಾಗಿದೆ’ ಎಂದು ಹೇಳಿದರು. 

ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ ಲಕ್ಷ್ಮಿ ಗೋಪಾಲಸ್ವಾಮಿ, ‘ಅಭಿನಯ ಮತ್ತು ನೃತ್ಯದಲ್ಲಿ ಯಶಸ್ಸು ಸಾಧಿಸಲು ಸರಿಯಾದ ಹಾದಿಯಲ್ಲಿ ಸಾಗಬೇಕು. ಈ ಗೌರವವು ಸಂತೋಷ ನೀಡಿದೆ’ ಎಂದರು. 

ಇದೇ ವೇಳೆ ಕಲಾವಿದರು ಭರತನಾಟ್ಯ, ಕುಚಿಪುಡಿ, ಒಡಿಸ್ಸಿ, ಕಥಕ್ ಸೇರಿ ವಿವಿಧ ನೃತ್ಯ ಪ್ರಕಾರದಲ್ಲಿ ಪ್ರದರ್ಶನ ನೀಡಿದರು. ಎ.ವಿ. ಸತ್ಯನಾರಾಯಣ ಅವರು ನಾಟ್ಯ ಸಂಯೋಜನೆ ಮಾಡಿರುವ ‘ಭಜ ಗೋವಿಂದಂ’ ನೃತ್ಯ ನಾಟಕ ಪ್ರದರ್ಶನವೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.