ಬೆಂಗಳೂರು: ವಿಶ್ವ ಭೂ ದಿನಾಚರಣೆಯನ್ನು ನಗರದಲ್ಲಿಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಜಾಥಾ, ಸೈಕಲ್ ಸವಾರಿ, ನೃತ್ಯ ಹಾಗೂ ಕಲಾಕೃತಿ ಪ್ರದರ್ಶನದ ಮೂಲಕ ಪರಿಸರ ಪ್ರೇಮಿಗಳು ಜಾಗೃತಿ ಮೂಡಿಸಿದರು.
ಅವನಿ ರೋಟರಿ ಕ್ಲಬ್ ಪಂಚಭೂತಗಳ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ 45 ದಿನಗಳ‘ಪರಿಸರ ಉತ್ಸವ’ವನ್ನು ಹಮ್ಮಿಕೊಂಡಿದೆ. ನಟ ಯಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಲಿ ಮುಖವಾಡ ಹೊತ್ತ ಸೈಕಲ್ ಹತ್ತಿ, ಜಾಗೃತಿ ಮೂಡಿಸಿದರು. ಮಕ್ಕಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಬಳಿಕ ಮಾತನಾಡಿದ ಯಶ್,‘ಸರ್ಕಾರಗಳಿಗೆ ಪರಿಸರ ಸಂರಕ್ಷಣೆ ಮುಖ್ಯವಾಗುವುದಿಲ್ಲ. ಬೇಡವಾದ ಕೆಲಸಗಳಲ್ಲಿ ತೊಡಗಿರುತ್ತವೆ. ಆದ ಕಾರಣ ಜನರೇ ಪರಿಸರ ಸಂರಕ್ಷಣೆಗೆ ಮುಂದಾಗಬೇಕು.ಮನುಷ್ಯ ಸತ್ತ ಮೇಲೆ ತನ್ನನ್ನು ಸುಡಲಾದರೂ ಎರಡು ಮರ ಬೆಳೆಸಬೇಕು. ತಮ್ಮಮಕ್ಕಳನ್ನು ಬೆಳೆಸುವ ರೀತಿ ಮರಗಳನ್ನೂ ಪೋಷಕರುಪಾಲನೆ ಮಾಡಬೇಕು’ ಎಂದು ಹೇಳಿದರು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮಾತನಾಡಿ,‘ಆಧುನೀಕರಣದ ಹೆಸರಿನಲ್ಲಿ ಇಂದು ನಾವು ಬೆಂಗಳೂರಿನ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಬೆಂಗಳೂರು ದೆಹಲಿಯಂತೆ ಮಾಲಿನ್ಯ ನಗರವಾಗುವುದನ್ನು ತಪ್ಪಿಸಲು ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು’ ಎಂದು ಹೇಳಿದರು.
27 ಕಲಾವಿದರು ರಚಿಸಿದ ಪಂಚಭೂತಗಳಿಗೆ ಸಂಬಂಧಿಸಿದ 50 ಕಲಾಕೃತಿಗಳ ಪ್ರದರ್ಶನವನ್ನುಏರ್ಪಡಿಸಲಾಗಿತ್ತು. ಕಲಾಕೃತಿಗಳು ಗಮನ ಸೆಳೆದವು.
‘ನಮ್ಮನ್ನು ಏನೂ ಮಾಡಲಾಗುವುದಿಲ್ಲ’
ಮುಖ್ಯಮಂತ್ರಿಗಳು ನಿಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆಯೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಟ ಯಶ್, ‘ನಾವು ಸಾರ್ವಜನಿಕರ ಆಸ್ತಿ. ನಮ್ಮನ್ನು ಏನೂ ಮಾಡಲಾಗುವುದಿಲ್ಲ.ಹಾಗೇನಾದರೂ ನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ’ ಎಂದು ಉತ್ತರಿಸಿದರು.
‘ಮಂಡ್ಯದಲ್ಲಿ ಶೇ 80ರಷ್ಟು ಮತದಾನವಾಗಿರುವುದು ಖುಷಿ ತಂದಿದೆ. ಒಳ್ಳೆಯ ಫಲಿಂತಾಶ ಬರಬಹುದು ಕಾದುನೋಡೋಣ, ಶಿವರಾಮೇಗೌಡರಂಥ ವ್ಯಕ್ತಿಗಳ ಹೇಳಿಕೆಯ ಕುರಿತು ನಾನು ಮಾತನಾಡುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.