ಬೆಂಗಳೂರು: ವೃದ್ಧ ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಶೇ 16ರಷ್ಟು ವೃದ್ಧ ಮಹಿಳೆಯರು, ಮಕ್ಕಳು ಮತ್ತು ಸೊಸೆಯಂದಿರು ಹಾಗೂ ಸಂಬಂಧಿಕರಿಂದ ನಿಂದನೆಗೆ ಒಳಾಗುತ್ತಿದ್ದಾರೆ ಎಂದು ‘ಹೆಲ್ಪ್‌ಏಜ್ ಇಂಡಿಯಾ ಸಂಸ್ಥೆ ವರದಿ ತಿಳಿಸಿದೆ.
ವಿಶ್ವಸಂಸ್ಥೆಯು ಜೂನ್ 15 ಅನ್ನು 'ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ'ವಾಗಿ ಗುರುತಿಸಿರುವುದರಿಂದ ಹೆಲ್ಪ್ಏಜ್ ಇಂಡಿಯಾ ಸಂಸ್ಥೆ ಸಿದ್ಧಪಡಿಸಿರುವ ವರದಿಯನ್ನು ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಬಿಡುಗಡೆ ಮಾಡಿದರು.
ವೃದ್ಧ ಮಹಿಳೆಯರು ದಿನನಿತ್ಯವೂ ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಪ್ರಮುಖ ಎಂಟು ಮಾನದಂಡಗಳನ್ನು ಅನುಸರಿಸಿ ವರದಿ ಸಿದ್ಧಪಡಿಸಲಾಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ವೃದ್ಧ ಮಹಿಳೆಯರು ಅನುಭವಿಸುತ್ತಿರುವ ತೊಂದರೆಗಳು, ಸಾಮಾಜಿಕ ತಾರತಮ್ಯಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
60ರಿಂದ 90 ವಯೋಮಾನದ 7,911 ಮಹಿಳೆಯರ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲಾಗಿದೆ. ಕರ್ನಾಟಕ ಸೇರಿದಂತೆ 20 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ 578 ವೃದ್ಧ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ವೃದ್ಧ ಮಹಿಳೆಯರು ಮಕ್ಕಳಿಂದ ಶೇ 40ರಷ್ಟು ಮತ್ತು ಸೊಸೆಯಿಂದ ಶೇ 27ರಷ್ಟು ಹಾಗೂ ಸಂಬಂಧಿಕರಿಂದ ಶೇ 31ರಷ್ಟು ನಿಂದನೆಗೆ ಒಳಗಾಗುತ್ತಿದ್ದಾರೆ. ಆದರೆ, ಭಯದಿಂದಾಗಿ ಬಹುತೇಕ ಮಹಿಳೆಯರು ಪೊಲೀಸರಿಗೆ ದೂರು ಸಲ್ಲಿಸುತ್ತಿಲ್ಲ ಎಂದು ವರದಿ ತಿಳಿಸಿದೆ.
‘ಮಹಿಳೆಯರು ವಯಸ್ಸಾದಂತೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಮೂಲಕ ಗೌರವದಿಂದ ಕಾಣಬೇಕು. ಸರ್ಕಾರದ ಯೋಜನೆಗಳ ಬಗ್ಗೆಯೂ ಜಾಗೃತಿ ಮೂಡಿಸುವುದು ಅಗತ್ಯವಿದೆ. ಪಿಂಚಣಿ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಸೌಲಭ್ಯಗಳು ಸಮರ್ಪಕವಾಗಿ ದೊರೆಯಬೇಕು’ ಎಂದು ಹೆಲ್ಪ್‌ಏಜ್ ಇಂಡಿಯಾ ಸಿಇಒ ರೋಹಿತ್ ಪ್ರಸಾದ್ ತಿಳಿಸಿದ್ದಾರೆ.
ವೃದ್ಧ ಮಹಿಳೆಯರ ಸಮಸ್ಯೆಗಳು ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದವರು; ಶೇ 78ರಷ್ಟು ಸಾಮಾಜಿಕ ತಾರತಮ್ಯಕ್ಕೆ ಒಳಗಾಗುವವರು; ಶೇ 64ರಷ್ಟು ಹಣಕಾಸಿನ ಕೊರತೆ ಎದುರಿಸುತ್ತಿರುವವರು; ಶೇ 53ರಷ್ಟು ಯಾವುದೇ ಆಸ್ತಿಗಳು ಇಲ್ಲದವರು; ಶೇ 66ರಷ್ಟು ಯಾವುದೇ ಉಳಿತಾಯ ಹೊಂದಿಲ್ಲದವರು; ಶೇ 75ರಷ್ಟು ಡಿಜಿಟಲ್ ಉಪಕರಣಗಳನ್ನು ಬಳಸಿಯೇ ಇಲ್ಲದವರು; ಶೇ 60ರಷ್ಟು ಸ್ಮಾರ್ಟ್‌ಫೋನ್ ಹೊಂದಿಲ್ಲದವರು; ಶೇ 59ರಷ್ಟು ಆರೋಗ್ಯ ವಿಮೆ ಹೊಂದಿಲ್ಲದವರು; ಶೇ 64ರಷ್ಟು ಪೂರ್ಣಾವಧಿ ಅಥವಾ ಅರೆಕಾಲಿಕ ಉದ್ಯೋಗದಲ್ಲಿರುವವರು ಶೇ 33ರಷ್ಟು
ಪ್ರಮುಖ ಸಲಹೆಗಳು
* ವೃದ್ಧರಿಗೆ ಅನುಕೂಲವಾಗುವ ವಾತಾವರಣ ಸೃಷ್ಟಿಸಬೇಕು.
* ವೃದ್ಧ ಮಹಿಳೆಯರು ಮತ್ತು ಅವರ ಕುಟುಂಬಗಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು.
* ವಯಸ್ಸಾದ ಮಹಿಳೆಯರಿಗೆ ಡಿಜಿಟಲ್ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಬೇಕು.
* ವೃದ್ಧರ ನಿಂದನೆ ತಡೆಗಟ್ಟುವ ಜಾಗೃತಿ ಮೂಡಿಸಬೇಕು.
* ವೃದ್ಧ ಮಹಿಳೆಯರ ಹಕ್ಕುಗಳು ಮತ್ತು ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು.
* ವೃದ್ಧ ಮಹಿಳೆಯರಿಗೆ ಸರ್ಕಾರದ ಕಲ್ಯಾಣ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.