ADVERTISEMENT

ವಿಶ್ವ ಪರಿಸರ ದಿನ: ರಾಜಧಾನಿಯಲ್ಲಿ ಪರಿಸರ ಕಳಕಳಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 16:08 IST
Last Updated 5 ಜೂನ್ 2024, 16:08 IST
ಸ್ವಯಂ ಜಾಗೃತಿ ಸೇವಾ ಟ್ರಸ್ಟ್‌ನ ಸದಸ್ಯರು ಹಾಗೂ ವಿದ್ಯಾರ್ಥಿಗಳು ನಾಗರಬಾವಿಯ ಮಾನಸನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಟ್ಟರು. ಟ್ರಸ್ಟ್‌ನ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಭಾಗವಹಿಸಿದ್ದರು.
ಸ್ವಯಂ ಜಾಗೃತಿ ಸೇವಾ ಟ್ರಸ್ಟ್‌ನ ಸದಸ್ಯರು ಹಾಗೂ ವಿದ್ಯಾರ್ಥಿಗಳು ನಾಗರಬಾವಿಯ ಮಾನಸನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಟ್ಟರು. ಟ್ರಸ್ಟ್‌ನ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಭಾಗವಹಿಸಿದ್ದರು.   

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ವಿವಿಧೆಡೆ ಸಸಿ ನೆಡುವ ಮತ್ತು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಬುಧವಾರ ನಡೆದವು.

ವಿವಿಧ ಸಂಘ–ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಉದ್ಯಮಗಳು ಹಸಿರು ಕಾಳಜಿ ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದವು.

ಶಿಲ್ಪಾ ಫೌಂಡೇಷನ್‌ ಸಂಸ್ಥೆಯು ವಿಷನ್‌ ನೆಟ್‌ ಮತ್ತು ಸಾಫ್ಟ್‌ ಟೆಕ್‌ ಇಂಡಿಯಾ ಸಹಯೋಗದಲ್ಲಿ ಪರಿಸರವಾದಿ ಪ್ರಕೃತಿ ಪ್ರಸನ್ನ ಅವರ ನೇತೃತ್ವದಲ್ಲಿ ‘ಭವಿಷ್ಯದ ನಾಳೆಗಳಿಗಾಗಿ’ ಟಾಟಾನಗರದಲ್ಲಿ ಸಸಿಗಳನ್ನು ನೆಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ADVERTISEMENT

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಮಾಡಲಾಯಿತು. ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಭಾಗವಹಿಸಿದ್ದರು.

ಹೃದಯ ಸ್ಪರ್ಶ ಟ್ರಸ್ಟ್‌ನಿಂದ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭಾಗವಹಿಸಿ ‘ಪರಿಸರ ರಕ್ಷಣೆಗೆ ಸಾರ್ವಜನಿಕರು ಕೈ ಜೋಡಿಸಬೇಕು’ ಎಂದರು.

ಸ್ವಯಂ ಜಾಗೃತಿ ಸೇವಾ ಟ್ರಸ್ಟ್‌ ವತಿಯಿಂದ ನಾಗರಬಾವಿಯ ಮಾನಸನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ವಿಶ್ವ ಪರಿಸರ ದಿನದ ಅಂಗವಾಗಿ ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನ ನಿರ್ದೇಶಕಿ ಶಿಲ್ಪಾ ಎಂ., ಅವರು ಪೀಣ್ಯ ಘಟಕ 9ರಲ್ಲಿ ಆವರಣದಲ್ಲಿ ಸಸಿ ನೆಟ್ಟರು. ಉತ್ತಮ ಕಾರ್ಯ, ಶಿಸ್ತುಬದ್ಧ ಸಮವಸ್ತ್ರ ಧರಿಸಿದ ಚಾಲನಾ ಸಿಬ್ಬಂದಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಪ್ರದಾನ: ವಿಶ್ವ ಪರಿಸರ ದಿನದ ಅಂಗವಾಗಿ ಭಾರತೀಯ ಸಮಾಜ ಸೇವಾ ಟ್ರಸ್ಟ್‌ ವತಿಯಿಂದ ನಿಡುಮಾಮಿಡಿ ಮಠದಲ್ಲಿ ಆಯೋಜಿಸಿದ್ದ ‘ವಾರ್ಷಿಕ ಪರಿಸರ ಸಂರಕ್ಷಣಾ ಸೇವಾ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಬುಧವಾರ ಚಾಲನೆ ನೀಡಲಾಯಿತು. ಪರಿಸರ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ, ವೃಕ್ಷ ಹಾಗೂ ಭಜನಾ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ವ ಪರಿಸರ ದಿನದ ಅಂಗವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಲಪತಿ ಎಸ್.ವಿ. ಸುರೇಶ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು. ‘ಹವಾಮಾನ ವೈಪರೀತ್ಯದಿಂದ ನಾವೆಲ್ಲರೂ ಈ ಸುಡುಬಿಸಿಲನ್ನು ಕಾಣುತ್ತಿದ್ದೇವೆ. ಹೀಗಾಗಿ ಪರಿಸರವನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಶಾಲಾ ಕಾಲೇಜುಗಳಲ್ಲಿ ದಿನದಲ್ಲಿ ಒಂದು ಗಂಟೆಯಾದರೂ ಪರಿಸರ ಸಂರಕ್ಷಣೆಯ ಕುರಿತು ಪಾಠ ಮಾಡಬೇಕು‘ ಎಂದರು.

ಜಯನಗರದಲ್ಲಿ ಬಾಂಧವ ನಾಗರಾಜು ಅವರು ಶಾಲಾ ಮಕ್ಕಳೊಂದಿಗೆ ಸಸಿ ನೆಟ್ಟರು.
ಭಾರತೀಯ ಸಮಾಜ ಸೇವಾ ಟ್ರಸ್ಟ್‌ ನಿಡುಮಾಮಿಡಿ ಮಠದಲ್ಲಿ ಆಯೋಜಿಸಿದ್ದ ‘ವಾರ್ಷಿಕ ಪರಿಸರ ಸಂರಕ್ಷಣಾ ಸೇವಾ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ನಿಡುಮಾಮಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಾಹಿತಿ ಚಂದ್ರಶೇಖರ ಕಂಬಾರ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್ ಟ್ರಸ್ಟ್‌ನ ಅಧ್ಯಕ್ಷ ಶಿವಮಲ್ಲು ಭಾಗವಹಿಸಿದ್ದರು.
ವಿಶ್ವ ಪರಿಸರ ದಿನದ ಅಂಗವಾಗಿ ಆಡುಗೋಡಿಯಲ್ಲಿರುವ ಸಿಎಆರ್ (ನಗರ ಸಶಸ್ತ್ರ ಮೀಸಲು ಪಡೆ) ದಕ್ಷಿಣ ವಿಭಾಗದ ಮೈದಾನದಲ್ಲಿ ಬಿ. ದಯಾನಂದ ಎ.ಎನ್. ಯಲ್ಲಪ್ಪರೆಡ್ಡಿ ಅವರು ಸಸಿ ನೆಟ್ಟರು. ಪ್ರಜಾವಾಣಿ ಚಿತ್ರ

1 ಕೋಟಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ

ಬೆಂಗಳೂರು: ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದು ಕೋಟಿ ಸಸಿ ನೆಡಲು ಪೊಲೀಸರು ವಿಶೇಷ ಅಭಿಯಾನಕ್ಕೆ ಆಡುಗೋಡಿಯಲ್ಲಿರುವ ಸಿಎಆರ್ (ನಗರ ಸಶಸ್ತ್ರ ಮೀಸಲು ಪಡೆ) ದಕ್ಷಿಣ ವಿಭಾಗದ ಮೈದಾನದಲ್ಲಿ ಬುಧವಾರ ಚಾಲನೆ ನೀಡಲಾಯಿತು. ವಿಶ್ವ ಪರಿಸರ ದಿನದ ಅಂಗವಾಗಿ ಗೋ ಗ್ರೀನ್ ರೆವೆಲ್ಯೂಷನ್ ಸಂಘಟನೆ ಸಹಯೋಗದಲ್ಲಿ ಪೊಲೀಸರು ಈ ಅಭಿಯಾನ ರೂಪಿಸಿದ್ದಾರೆ. ಪೊಲೀಸ್ ಠಾಣೆಗಳು ಪೊಲೀಸ್ ವಸತಿ ಗೃಹಗಳ ಆವರಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಗುರಿ ಇದೆ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು. ಪರಿಸರ ತಜ್ಞ ಎ.ಎನ್. ಯಲ್ಲಪ್ಪರೆಡ್ಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.