ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆವರಣದಲ್ಲಿ ಶ್ರೀಶ್ರೀ ರವಿಶಂಕರ್ ಗುರೂಜಿ ಅವರು ಸಸಿ ನೆಡುವುದರ ಮೂಲಕ ದೇಶದಾದ್ಯಂತ 1 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿದರು.
ಶ್ರೀಶ್ರೀ ರವಿಶಂಕರ ಗುರೂಜಿ, ‘ಸಂಸ್ಥೆಯ ವತಿಯಿಂದ ದೇಶದ 22 ರಾಜ್ಯಗಳಲ್ಲಿ 2,300 ಸ್ವಯಂ ಸೇವಕರು ಹಾಗೂ ಸಂಸ್ಥೆಯ ಶಿಕ್ಷಕರ ಸಹಯೋಗದಲ್ಲಿ 1 ಕೋಟಿ ಸಸಿಗಳನ್ನು ನೆಡಲಾಗುವುದು. ಇದರಲ್ಲಿ ಸಾವಿರಾರು ರೈತರು ತಮ್ಮ ತೋಟದಲ್ಲಿ ಬೆಳೆದ ಗಿಡಗಳನ್ನು ಕೊಡುಗೆಯಾಗಿ ನೀಡಲಿದ್ದಾರೆ. ಇಂತಹ ರೈತರಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಹಣ್ಣಿನ ಗಿಡಗಳನ್ನು ನೀಡಲಿದ್ದು, ಇದರಿಂದ ರೈತರಿಗೆ ಆರ್ಥಿಕವಾಗಿ ಸಹಾಯವಾಗಲಿದೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ 4 ಲಕ್ಷ ಸಸಿಗಳನ್ನು ನೆಡಲಿದ್ದು, ವಿಶ್ವ ಹವಾಮಾನ ದಿನದ ಅಂಗವಾಗಿ ‘ಲ್ಯಾಂಡ್ ರೆಸ್ಟೊರೇಷನ್, ಡೆಸರ್ಟಿಫಿಕೇಷನ್ ಆ್ಯಂಡ್ ಡ್ರಾಟ್ ರೆಸೀಲಿಯೆನ್ಸ್’ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪರಿಸರ ಸಂರಕ್ಷಣೆಯ ಜೊತೆಗೆ ಸಾಮಾಜಿಕ ಸಬಲೀಕರಣ ಒಳಗೊಂಡಿರುವ ‘ಸೀಡ್ ರಾಖಿ ಯೋಜನೆ’ಯನ್ನು ಆರಂಭಿಸಲಿದೆ. ಇದರಿಂದ, ಬುಡಕಟ್ಟು ಜನಾಂಗದ ಮಹಿಳೆಯರಿಗೆ ಲಾಭವಾಗಲಿದೆ’ ಎಂದು ಹೇಳಿದರು.
‘ಪ್ರಾಕೃತಿಕ ಕೃಷಿಗೆ ಮರಳಿ ಬಂದಿರುವ ಅನೇಕ ರೈತರು ಬಹು ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಟೊಮೆಟೊ, ಕುಂಬಳಕಾಯಿ, ಸೌತೇಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಮನೆಯಲ್ಲಿಯೇ ಬೆಳೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.