ಬೆಂಗಳೂರು: ‘ತಾಯ್ತನವು ಅಪಾರ ಆನಂದ, ಪ್ರೀತಿ ಮತ್ತು ವಿಶಿಷ್ಟ ಸವಾಲುಗಳಿಂದ ಒಡಗೂಡಿದ ಅನನ್ಯ ಅನುಭವ. ತಾಯ್ತನದ ಪ್ರಯಾಣದ ಪ್ರತಿ ಹಂತದಲ್ಲಿಯೂ ವಿಶೇಷ ತಿಳಿವಳಿಕೆ ಮತ್ತು ಬೆಂಬಲ ಅಗತ್ಯ’ ಎಂದು ವೈದ್ಯಕೀಯ ತಜ್ಞರು ತಿಳಿಸಿದರು.
ಮಣಿಪಾಲ್ ಆಸ್ಪತ್ರೆ ಸಮೂಹವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಿಶ್ವ ತಾಯಂದಿರ ದಿನ’ ಕಾರ್ಯಕ್ರಮದಲ್ಲಿ ವೈದ್ಯಕೀಯ ತಜ್ಞರು ತಾಯ್ತನದ ಸಂಕೀರ್ಣತೆ ಮತ್ತು ಸವಾಲುಗಳ ಬಗ್ಗೆ ವಿವರಿಸಿದರು.
ವರ್ತೂರು ರಸ್ತೆಯ ಮಣಿಪಾಲ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ವಿಜಯಾ ಮೀನಾಕ್ಷಿ, ಆಂತರಿಕ ಔಷಧ ವಿಭಾಗದ ಸಲಹೆಗಾರ ಡಾ.ದಿಲಿಪ್ ರಾಜ್ ಕೆ.ಎಸ್., ವೈಟ್‌ಫೀಲ್ಡ್ ಆಸ್ಪತ್ರೆಯ ಮನೋವೈದ್ಯೆ ಡಾ.ನೀತು ತಿವಾರಿ ಹಾಗೂ ಮೂತ್ರ ವಿಜ್ಞಾನ ವಿಭಾಗದ ಸಲಹೆಗಾರ ಡಾ.ದೀಪಕ್ ಜಯಪ್ರಕಾಶ್ ಅವರು ವಿವಿಧ ವಯೋಮಾನದ ತಾಯಂದಿರು ಎದುರಿಸುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
‘ಬಹುತೇಕ ತಾಯಂದಿರು ಆರೋಗ್ಯ ಕಡೆಗಣಿಸುತ್ತಾರೆ. ಇದರಿಂದ ಸಮಸ್ಯೆ ಉಲ್ಬಣವಾಗಿ, ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ. ಆದ್ದರಿಂದ ತಾಯಂದಿರು ನಿಯಮಿತ ಪರೀಕ್ಷೆಗೆ ಒಳಗಾಗಿ, ಸಮಸ್ಯೆ ಇದ್ದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಡಾ.ದಿಲಿಪ್ ರಾಜ್ ಹೇಳಿದರು.
ಡಾ.ನೀತು ತಿವಾರಿ, ‘ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ, ನಿಯಮಿತ ಆರೋಗ್ಯ ತಪಾಸಣೆ ಸೇರಿ ವಿವಿಧ ಕ್ರಮಗಳ ಮೂಲಕ ತಾಯಂದಿರು ಆರೋಗ್ಯ ವೃದ್ಧಿಗೆ ಆದ್ಯತೆ ನೀಡಬೇಕು’ ಎಂದರು.
ಡಾ.ದೀಪಕ್ ಜಯಪ್ರಕಾಶ್, ‘ವಯಸ್ಸಾದ ಮಹಿಳೆಯರು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮೂತ್ರ ಸೋಂಕು ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ತಾಯಂದಿರು ಭಾಗವಹಿಸಿದ್ದರು. ಜೀವನದಲ್ಲಿ ತಾವು ಎದುರಿಸಿದ ಸಮಸ್ಯೆಗಳು ಹಾಗೂ ಅದನ್ನು ಪರಿಹರಿಸಿಕೊಂಡ ಬಗೆಯನ್ನು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.