ADVERTISEMENT

ಕೋಟ್ಪಾ ಕಾಯ್ದೆ ಬಲಪಡಿಸಿ: ಕ್ಯಾನ್ಸರ್ ತಜ್ಞ ಡಾ. ರಮೇಶ್ ಬಿಳಿಮಗ್ಗ ಆಗ್ರಹ

ವಿಶ್ವ ತಂಬಾಕು ರಹಿತ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 16:12 IST
Last Updated 31 ಮೇ 2022, 16:12 IST
ಸಂಗ್ರಹಿಸಿದ ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ವೀಕ್ಷಿಸಿದರು
ಸಂಗ್ರಹಿಸಿದ ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ವೀಕ್ಷಿಸಿದರು   

ಬೆಂಗಳೂರು:ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲುಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ (ಕೋಟ್ಪಾ) ಕಾಯ್ದೆಯನ್ನು ಬಲಪಡಿಸಿ, ದಂಡ ಹೆಚ್ಚಿಸಬೇಕು. ಸಾರ್ವಜನಿಕ ಸ್ಥಳಗಳನ್ನು ಧೂಮಪಾನ ಮುಕ್ತಗೊಳಿಸಬೇಕು’ ಎಂದು ಕ್ಯಾನ್ಸರ್ ತಜ್ಞ ಡಾ. ರಮೇಶ್ ಬಿಳಿಮಗ್ಗ ಆಗ್ರಹಿಸಿದರು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ಸಹಯೋಗದಲ್ಲಿತಂಬಾಕು ಮುಕ್ತ ಕರ್ನಾಟಕ ವೇದಿಕೆ ನಗರದಲ್ಲಿ ಮಂಗಳವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ಪ್ರದರ್ಶಿಸಿ,ವಿಶ್ವ ತಂಬಾಕು ರಹಿತ ದಿನ ಆಚರಿಸಲಾಯಿತು.

‘ಪ್ರಸ್ತುತ ಕೋಟ್ಪಾ ಕಾಯ್ದೆಯಡಿ ವಿಧಿಸುತ್ತಿರುವ ದಂಡ ತೀರಾ ಕಡಿಮೆ. ಈ ಕಾಯ್ದೆಯು ಕಠಿಣವಾಗಿಲ್ಲ. ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳನ್ನು ಒಳಗೊಂಡಿಲ್ಲ. ಸಾರ್ವಜನಿಕ ಸ್ಥಳಗಳು ಧೂಮಪಾನದ ಹೊಗೆಯಿಂದ ಶೇ 100 ರಷ್ಟು ಮುಕ್ತವಾಗಬೇಕು. ಸದ್ಯ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕವಾಗಿ ಧೂಮಪಾನ ಮಾಡಲಾಗುತ್ತಿದೆ. ಕೋಟ್ಪಾ ಕಾಯ್ದೆಯನ್ನು ಬಲಪಡಿಸಲು ರಾಜ್ಯದ ಎಲ್ಲ ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಪರೋಕ್ಷ ಧೂಮಪಾನವೂ ನೇರ ಧೂಮಪಾನಕ್ಕೆ ಸಮಾನ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಪರೋಕ್ಷ ಧೂಮಪಾನದಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿ, ಧೂಮಪಾನಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.‌

ಸಂಸದ ಪಿ.ಸಿ.ಮೋಹನ್,‘ಆರೋಗ್ಯಕ್ಕೆ ಹಾನಿಕಾರಕವಾದ ತಂಬಾಕು ಉತ್ಪನ್ನಗಳಿಂದ ಯುವಜನರು ದೂರ ಇರಬೇಕು. ಪರೋಕ್ಷ ಧೂಮಪಾನ ತಗ್ಗಿಸುವುದು ನಮ್ಮೆಲ್ಲರ ಹೊಣೆ. ಸಮಾಜದ ಹಿತದೃಷ್ಟಿಯಿಂದ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ತಿಳಿಸಿದರು.

ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಕಾರ್ಯಕಾರಿ ಅಧ್ಯಕ್ಷ ಡಾ.ಬಿ.ಎಸ್. ಅಜಯ್‌ಕುಮಾರ್, ‘ತಂಬಾಕು ನಿರ್ಮೂಲನೆಯಿಂದ ಶೇ 30ರಿಂದ ಶೇ 35 ರಷ್ಟು ಕ್ಯಾನ್ಸರ್ ನಿಯಂತ್ರಣ ಸಾಧ್ಯ.ಇಡೀ ಸಮಾಜ ಒಗ್ಗೂಡಿ, ತಂಬಾಕು ಉತ್ಪನ್ನಗಳ ಬಳಕೆ ನಿಲ್ಲಿಸುವಂತೆ ಹೋರಾಟ ನಡೆಸಬೇಕು. ತಂಬಾಕು ಬೆಳೆಗಾರರಿಗೆ ಪರ್ಯಾಯ ಬೇಸಾಯ ಮಾಡಲು ಪ್ರೋತ್ಸಾಹಿಸಬೇಕು. ಎಚ್‌ಸಿಜಿ ಹುಣಸೂರಿನಲ್ಲಿ ಈ ಪ್ರಯತ್ನ ಪ್ರಾರಂಭಿಸಿದೆ’ ಎಂದು ಹೇಳಿದರು.

ಸಿಗರೇಟ್, ಬೀಡಿ ತುಂಡುಗಳ ಸಂಗ್ರಹ

ಧೂಮಪಾನದ ಅಪಾಯದ ಬಗ್ಗೆಜಾಗೃತಿ ಮೂಡಿಸಲು ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಸದಸ್ಯರು ಸಾವಿರಕ್ಕೂ ಅಧಿಕ ಸಿಗರೇಟ್ ಹಾಗೂ ಬೀಡಿ ತುಂಡುಗಳನ್ನು ಸಂಗ್ರಹಿಸಿದ್ದಾರೆ. ನಗರದ ವಿವಿಧ ಬಸ್‌ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು, ಉದ್ಯಾನಗಳು, ಸರ್ಕಾರಿ ಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಈ ಸಿಗರೇಟ್ ಮತ್ತು ಬೀಡಿ ತುಂಡುಗಳು ಲಭ್ಯವಾಗಿವೆ. ಇವುಗಳ ಸುರಕ್ಷಿತ ವಿಲೇವಾರಿಗೆ ಸರ್ಕಾರೇತರ ಸಂಸ್ಥೆಯೊಂದಕ್ಕೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.

ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಶಾಸಕಿ ಸೌಮ್ಯಾ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.