ADVERTISEMENT

ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ; ಪ್ರೋತ್ಸಾಹ ಧನ ಹೆಚ್ಚಳ ಅಗತ್ಯ: ಸಚಿವ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 15:54 IST
Last Updated 11 ಜುಲೈ 2023, 15:54 IST
ಕಾರ್ಯಕ್ರಮದಲ್ಲಿ ಜಾಗೃತಿ ವಿಡಿಯೊವನ್ನು ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರ ಜತೆಗೆ ದಿನೇಶ್ ಗುಂಡೂರಾವ್ ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಜಾಗೃತಿ ವಿಡಿಯೊವನ್ನು ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರ ಜತೆಗೆ ದಿನೇಶ್ ಗುಂಡೂರಾವ್ ವೀಕ್ಷಿಸಿದರು.    

ಬೆಂಗಳೂರು: ‘ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪುರುಷರು ಆಸಕ್ತಿ ತೋರುತ್ತಿಲ್ಲ. ಆದ್ದರಿಂದ ಈ ಶಸ್ತ್ರಚಿಕಿತ್ಸೆಗೆ ಪುರುಷರಿಗೆ ನೀಡುವ ₹1,200 ಪ್ರೋತ್ಸಾಹ ಧನವನ್ನು, ₹10 ಸಾವಿರಕ್ಕೆ ಹೆಚ್ಚಿಸುವ ಅಗತ್ಯವಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಶ್ವ ಜನಸಂಖ್ಯಾ ದಿನದ ಪ್ರಯುಕ್ತ ಆರೋಗ್ಯ ಇಲಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

‘ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಇದು ಭವಿಷ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ. ಜನಸಂಖ್ಯೆ ಹೆಚ್ಚಾದಂತೆ ಮೂಲಸೌಕರ್ಯ ಸೇರಿ ವಿವಿಧ ವ್ಯವಸ್ಥೆಯನ್ನು ಕಲ್ಪಿಸಲು ಕಷ್ಟವಾಗುತ್ತದೆ. ಆದ್ದರಿಂದ, ಜನಸಂಖ್ಯೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕುಟುಂಬ ಯೋಜನೆಯಲ್ಲಿ ಪುರುಷರ ಸಹಭಾಗಿತ್ವವನ್ನು ಬಲಪಡಿಸಬೇಕು. ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಪುರುಷರು ಆಸಕ್ತಿ ತಾಳುವಂತಾಗಲು ಪ್ರೋತ್ಸಾಹ ಧನ ಹೆಚ್ಚಿಸಬೇಕು’ ಎಂದು ಹೇಳಿದರು. 

ADVERTISEMENT

‘ದೇಶದಲ್ಲಿ ಫಲವಂತಿಕೆ ದರ ಶೇ 2.3 ರಷ್ಟಿದೆ. ರಾಜ್ಯದಲ್ಲಿ ಈ ದರ ಶೇ 1.7 ರಷ್ಟಿದ್ದು, ದೇಶಕ್ಕೆ ಹೋಲಿಸಿದಲ್ಲಿ ತೀರಾ ಕಡಿಮೆ ಇದೆ. ಸೂಕ್ತ ವಯಸ್ಸಿನಲ್ಲಿ ವಿವಾಹ, ಮಕ್ಕಳ ಜನನದ ನಡುವಿನ ಅಂತರ ಸೇರಿ ವಿವಿಧ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು. 

ಮಾತ್ರೆ ವಿತರಣೆ

‘ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಬೇಕು. ಕುಟುಂಬ ಯೋಜನೆಗಳಡಿ ಪ್ರತಿ ವರ್ಷ ಸರಾಸರಿ 2.50 ಲಕ್ಷ ಮಹಿಳೆಯರಿಗೆ ಹಾಗೂ 1 ಸಾವಿರ ಪುರುಷರಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಸುಮಾರು 3 ಲಕ್ಷ ಐಯುಸಿಡಿ ಸಾಧನ ಅಳವಡಿಕೆ, 1.25 ಲಕ್ಷ ಅಂತರಾ ಚುಚ್ಚು ಮದ್ದು, 4 ಲಕ್ಷ ಮಾಲಾ–ಎನ್ ಮಾತ್ರೆ, 6.50 ಲಕ್ಷ ನಿರೋಧ್ ಹಾಗೂ 55 ಸಾವಿರ ಛಾಯಾ ಮಾತ್ರೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

ಆರೋಗ್ಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ., ಆಯುಕ್ತ ಡಿ. ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ನವೀನ್ ಭಟ್ ವೈ., ಇಲಾಖೆ ನಿರ್ದೇಶಕಿ ಡಾ.ಎಂ. ಇಂದುಮತಿ ಇದ್ದರು. 

ಕುಟುಂಬ ಯೋಜನೆಯಡಿ ನೀಡಲಾದ ಸೇವೆ ವಿಧಾನ

2020–21ರಿಂದ 2022–23 ಪುರುಷ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ: 2,168

ಮಹಿಳಾ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ : 9,02,545

ನಿರೋಧ್ ವಿತರಣೆ : 6,60,023

ಮಾಲಾ–ಎನ್ ಮಾತ್ರೆ ವಿತರಣೆ : 3,96,126

ಛಾಯಾ ಮಾತ್ರೆ ವಿತರಣೆ;99798 ಅಂತರ ಚುಚ್ಚುಮದ್ದು ವಿತರಣೆ : 2,39,292

ಗರ್ಭಧಾರಣಾ ಪರೀಕ್ಷೆ ಕಿಟ್‌ಗಳ ವಿತರಣೆ : 2,59,1809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.