ಬೆಂಗಳೂರು: ‘ಸುಸ್ಥಿರ ಸಾರಿಗೆ ಮತ್ತು ವಾಸಯೋಗ್ಯ ಪ್ರದೇಶ’ ಕುರಿತು ಪ್ರಥಮ ವಿಶ್ವ ವಿಚಾರ ಸಂಕಿರಣವನ್ನು ಐಐಎಸ್‌ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ವಿಶೇಷ ಆಸಕ್ತಿ ಗುಂಪು (ಎಸ್‌ಐಜಿ) ವತಿಯಿಂದ 2025ರ ಜೂನ್ 25ರಿಂದ 27ರವರೆಗೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ತಜ್ಞರು, ನೀತಿ ನಿರೂಪಕರು, ನಗರ ಯೋಜಕರು, ಸಂಶೋಧಕರು ಮತ್ತು ಉದ್ಯಮ ಮತ್ತು ಸಮುದಾಯದ ಮುಖಂಡರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಚರ್ಚೆ ನಡೆಸಲಿದ್ದಾರೆ.
ಸುಸ್ಥಿರ ಸಾರಿಗೆ ಮತ್ತು ವಾಸಯೋಗ್ಯ ಪ್ರದೇಶದಲ್ಲಿ (ಡಬ್ಲ್ಯುಎಸ್‌ಎಸ್‌ಟಿಎಲ್) ಇರುವ ಸವಾಲುಗಳು, ಹೊಸ ಪರಿಹಾರಗಳು ಮತ್ತು ಕಾರ್ಯತಂತ್ರ ಬಗ್ಗೆ ಮೂರು ದಿನ ಚರ್ಚೆ ನಡೆಯಲಿದೆ.
ಜನರ ಯೋಗಕ್ಷೇಮ, ಆರೋಗ್ಯ, ಸಮಾನತೆ ಸೇರಿದಂತೆ ಜೀವನದ ಗುಣಮಟ್ಟದ ವಿವಿಧ ಆಯಾಮಗಳ ಮೇಲೆ ಸಾರಿಗೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಸಮಗ್ರ ತಿಳಿವಳಿಕೆಯನ್ನು ತಜ್ಞರು ನೀಡಲಿದ್ದಾರೆ. ಪರಿಸರದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.
ಸಾರಿಗೆ ವ್ಯವಸ್ಥೆಗಳು ಆಧುನಿಕ ಸಮಾಜಕ್ಕೆ ಅವಶ್ಯವಾಗಿದ್ದು, ಅವಕಾಶಗಳನ್ನು ಮತ್ತು ಚಲನಶೀಲತೆಯನ್ನು ಸಾರಿಗೆ ವ್ಯವಸ್ಥೆ ಸಕ್ರಿಯಗೊಳಿಸುತ್ತದೆ. ಅದೇ ಹೊತ್ತಿಗೆ ಪರಿಸರ ಮಾಲಿನ್ಯ ಕೂಡ ಉಂಟಾಗುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುತ್ತದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬ ಕಾರಣಕ್ಕಾಗಿ ಡಬ್ಲ್ಯುಎಸ್‌ಎಸ್‌ಟಿಎಲ್ ಸಿಂಪೋಸಿಯಂ ಸರಣಿ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸುಸ್ಥಿರ ಸಾರಿಗೆ ಮತ್ತು ವಾಸಯೋಗ್ಯ ಪ್ರದೇಶದಲ್ಲಿ ಅತ್ಯಾಧುನಿಕ ಸಂಶೋಧನೆಗಳು ಮತ್ತು ನವೀನ ಅಭ್ಯಾಸಗಳನ್ನು ತಿಳಿಸುವುದು, ನೀತಿಗಳ ಪ್ರಭಾವ ವಿವರಿಸುವುದು, ಅಂತರಶಿಸ್ತನ್ನು ಉತ್ತೇಜಿಸುವುದು, ಕೌಶಲಜ್ಞಾನ ಮೂಲಕ ಸಾಮರ್ಥ್ಯ ವರ್ಧನೆ ಮಾಡುವುದು, ಸಮುದಾಯವನ್ನು ಭಾಗವಹಿಸುವಂತೆ ಮಾಡುವುದು, ಜಾಗತಿಕವಾಗಿ ಜಾಗೃತಿ ಮೂಡಿಸುವುದು ಇದರ ಉದ್ದೇಶ ಎಂದು ಸಂಘಟಕರು ತಿಳಿಸಿದ್ದಾರೆ.
ಮಾಹಿತಿಗೆ ಸಿಂಪೋಸಿಯಂ ವೆಬ್‌ಸೈಟ್: https://wsstl2025.iisc.ac.in ಅಥವಾ 91-80-2293-2939 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.