ಬೆಂಗಳೂರು: ಜಲ ಸಂರಕ್ಷಣೆ ಉದ್ದೇಶದಿಂದಕಬ್ಬನ್ ಉದ್ಯಾನದಲ್ಲಿ ಕೈಗೆತ್ತಿಕೊಂಡಿದ್ದ ‘ಕಬ್ಬನ್ ಪಾರ್ಕ್ ಪುನಶ್ಚೇತನ ಯೋಜನೆ’ (ಸಿಪಿಆರ್) ಪೂರ್ಣಗೊಂಡಿದ್ದು, ವಿಶ್ವ ಜಲ ದಿನದ ಅಂಗವಾಗಿ ಯೋಜನೆಯ ಕಾರ್ಯಗಳನ್ನು ಸೋಮವಾರ ಪರಿಚಯಿಸಲಾಯಿತು.
ಸಿಪಿಆರ್ ಯೋಜನೆಯಡಿ ಕಬ್ಬನ್ ಉದ್ಯಾನದಲ್ಲಿದ್ದ ಆರು ಬಾವಿಗಳ ಅಭಿವೃದ್ಧಿ, ದುರಸ್ತಿ ಹಾಗೂ ಮಳೆ ನೀರು ಸಂಗ್ರಹಕ್ಕಾಗಿ 73 ಇಂಗು ಗುಂಡಿಗಳನ್ನು ನಿರ್ಮಿಸುವ ಯೋಜನೆಯನ್ನು ಎರಡು ಹಂತಗಳಲ್ಲಿ 2017ರಿಂದ ಕೈಗೆತ್ತಿಕೊಳ್ಳಲಾಗಿತ್ತು. ಕಳೆದ ವರ್ಷವೇ ಯೋಜನೆ ಪೂರ್ಣಗೊಂಡಿದ್ದು, ಕೋವಿಡ್ ಸ್ಥಿತಿಯಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ.
ತೋಟಗಾರಿಕೆ ಇಲಾಖೆಯ ಆಶ್ರಯದಲ್ಲಿ ಬಯೋಮಿ ಎನ್ವಿರಾನ್‌ಮೆಂಟಲ್ ಟ್ರಸ್ಟ್, ಫ್ರೆಂಡ್ಸ್ ಆಫ್ ಲೇಕ್ಸ್ ಹಾಗೂ ಇಂಡಿಯಾ ಕೇರ್ ಫೌಂಡೇಷನ್ ಸಂಸ್ಥೆಗಳು ಈ ಯೋಜನೆಗೆ ಕೈಜೋಡಿಸಿದ್ದವು.
ಯೋಜನೆಯ ಕಾರ್ಯಕ್ರಗಳನ್ನು ಪರಿಶೀಲಿಸಿ ಮಾತನಾಡಿದ ತೋಟಗಾರಿಕೆ ಸಚಿವ ಆರ್.ಶಂಕರ್,‘ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಜಲ ದಿನದ ಅಂಗವಾಗಿ ಮಳೆ ನೀರು ಹಿಡಿದಿಟ್ಟುಕೊಳ್ಳುವ ಅಭಿಯಾನವನ್ನು ಘೋಷಿಸಿದ್ದಾರೆ. ಉದ್ಯಾನದಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ಸಿಪಿಆರ್ ಯೋಜನೆಯ ಕಾರ್ಯಗಳು ಶ್ಲಾಘನೀಯ’ ಎಂದರು.
‘ಉದ್ಯಾನದಲ್ಲಿ ಸಾಂಪ್ರದಾಯಿಕ ತೆರೆದ ಬಾವಿಗಳು ಮತ್ತು ಮಳೆನೀರು ಸಂಗ್ರಹ ಗುಂಡಿಗಳನ್ನು ನಿರ್ಮಿಸಿರುವುದು ಸಂತೋಷಕರ ಸಂಗತಿ. ಇವುಗಳಿಂದ ಉದ್ಯಾನಕ್ಕೆ ಅಗತ್ಯವಾದ ನೀರು ಲಭ್ಯವಾಗಲಿದೆ. ಮಳೆ ನೀರು ಸಂರಕ್ಷಣೆಗೆ ಇಂತಹ ಹೆಚ್ಚಿನ ಯೋಜನೆಗಳಿಗೆ ಇಲಾಖೆ ಕೈಜೋಡಿಸಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.