ADVERTISEMENT

ಬೆಂಗಳೂರು ನಗರದಾದ್ಯಂತ ಭಕ್ತಿ ಪ್ರೀತಿಯಿಂದ ಶ್ರೀಕೃಷ್ಣನ ಆರಾಧನೆ

ಬಗೆ ಬಗೆಯ ಭಕ್ಷ್ಯಗಳ ನೈವೇದ್ಯ ಮಾಡಿ ನಡೆಯಿತು ಅಷ್ಟಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 15:48 IST
Last Updated 26 ಆಗಸ್ಟ್ 2024, 15:48 IST
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಇಸ್ಕಾನ್‌ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. –ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್‌
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಇಸ್ಕಾನ್‌ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. –ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್‌   

ಬೆಂಗಳೂರು: ನಗರದಾದ್ಯಂತ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಮತ್ತು ಪ್ರೀತಿಯಿಂದ  ಆಚರಿಸಲಾಯಿತು. 

ದೇವಾಲಯಗಳಲ್ಲಿ ಶ್ರೀಕೃಷ್ಣ–ರಾಧೆ, ಕೃಷ್ಣ–ಬಲರಾಮರ ಮೂರ್ತಿಗಳಿಗೆ ಪುಷ್ಪಾಲಂಕಾರ ಮಾಡಿ, ವಿಶೇಷ ಪೂಜೆ ಮಾಡಲಾಯಿತು. ಹಲವರು ಮನೆಗಳಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಮಾಡಿ ನೈವೇದ್ಯ ಅರ್ಪಿಸಿದರು. 

ನಗರದ ಇಸ್ಕಾನ್‌ನ ಹರೇಕೃಷ್ಣ ಗಿರಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವೈಭವದಿಂದ ಆಚರಿಸಲಾಯಿತು. ರಾಧಾಕೃಷ್ಣಚಂದ್ರರ ಮೂರ್ತಿಗಳನ್ನು ವಜ್ರಾಭರಣಗಳಿಂದ, ಆಕರ್ಷಕ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ರಾಧಾಕೃಷ್ಣರಿಗೆ ಬೆಳಿಗ್ಗೆ ಮಹಾಮಂಗಳಾರತಿ ಮತ್ತು ಕೀರ್ತನೆಗಳಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾದವು.

ADVERTISEMENT

ಪಂಚಾಮೃತ, ಪಂಚಗವ್ಯ, ಪುಷ್ಪೋದಕ, ಫಲೋದಕಗಳಿಂದ ಅಭಿಷೇಕ ಮಾಡಲಾಯಿತು. ಕೃಷ್ಣನಿಗೆ ಪ್ರಿಯವಾದ 108 ಭಕ್ಷ್ಯಗಳ ನೈವೇದ್ಯಗಳ ಸೇವೆ ಸಲ್ಲಿಸಲಾಯಿತು. ಇಡೀ ಮಂದಿರವನ್ನು ಬಗೆಬಗೆಯ ಸುಗಂಧ ಭರಿತ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು. ಗೋಶಾಲೆಯಲ್ಲಿ ಗೋಪೂಜೆ ಮಾಡಲಾಯಿತು. ಉಯ್ಯಾಲೆ ಸೇವೆ, ತೆಪ್ಪೋತ್ಸವ ನಡೆಯಿತು. 

ಪೂರ್ಣಪ್ರಜ್ಞ ನಗರದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ತುಳಸಿ ಅರ್ಚನೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಬಸವನಗುಡಿಯಲ್ಲಿರುವ ಗೋವರ್ಧನಗಿರಿ ಗುಹಾಲಯ ಕ್ಷೇತ್ರ, ಉಡುಪಿ ಶ್ರೀ ಪುತ್ತಿಗೆ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರದಿಂದ ಆಚರಿಸಲಾಯಿತು. 

ನಗರದ ಹಲವರು ಮನೆಗಳಲ್ಲಿ ವಿಶಿಷ್ಟವಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದರು. ಕೃಷ್ಣನ ವಿಗ್ರಹವಿಟ್ಟು, ಚಕ್ಕುಲಿ, ಕೋಡುಬಳೆ, ರವೆ ಉಂಡೆ, ಕರ್ಜಿಕಾಯಿ, ಒಬ್ಬಟ್ಟು ಇತ್ಯಾದಿಗಳನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಮಾಡಿದರು.

ಬೆಂಗಳೂರಿನ ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನದ ರಸ್ತೆಯಲ್ಲಿರುವ ಪುತ್ತಿಗೆ ಶಾಖಾ ಮಠದ ಗೋವರ್ಧನ ಕ್ಷೇತ್ರದಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ದರ್ಶನ ನಡೆಯಿತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ನಗರದ ಭರವಸೆ ತಂಡದ ಸದಸ್ಯರು ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್‌ ವಿಶೇಷ ಮಕ್ಕಳ ಪುಣ್ಯಾಶ್ರಮದ ಮಕ್ಕಳಿಗೆ ಕೃಷ್ಣ–ರಾಧೆಯರ ವೇಷಭೂಷಣ ತೊಡಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.