ADVERTISEMENT

ಪದಕ ಗೆದ್ದಾಗ ಅಭಿನಂದಿಸುವ ಮೋದಿ ಇಂದು ಮೌನ: ನಟ ಕಿಶೋರ್‌

ಹೋರಾಟನಿರತ ಕುಸ್ತಿಪಟುಗಳೇ ನಿಮ್ಮೊಂದಿಗೆ ನಾವಿದ್ದೇವೆ ಸಮಾವೇಶದಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಮೇ 2023, 0:19 IST
Last Updated 24 ಮೇ 2023, 0:19 IST
ಸಮಾವೇಶದಲ್ಲಿ ನಟ ಕಿಶೋರ್ ಮಾತನಾಡಿದರು. ಸಂಘಟನೆ ರಾಜ್ಯಾಧ್ಯಕ್ಷ್ಯೆ ಬಿ.ಆರ್. ಅಪರ್ಣ, ಶೋಭಾ ಎಸ್. ಇದ್ದಾರೆ.
ಸಮಾವೇಶದಲ್ಲಿ ನಟ ಕಿಶೋರ್ ಮಾತನಾಡಿದರು. ಸಂಘಟನೆ ರಾಜ್ಯಾಧ್ಯಕ್ಷ್ಯೆ ಬಿ.ಆರ್. ಅಪರ್ಣ, ಶೋಭಾ ಎಸ್. ಇದ್ದಾರೆ.   

ಬೆಂಗಳೂರು: ‘ಮಹಿಳಾ ಕುಸ್ತಿಪಟುಗಳು ಪದಕಗಳನ್ನು ಗೆದ್ದಾಗ ಅಭಿನಂದಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೌನವಾಗಿದ್ದಾರೆ' ಎಂದು ನಟ ಕಿಶೋರ್‌ ಹೇಳಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಮಂಗಳವಾರ ಆಯೋಜಿಸಿದ್ದ ’ಹೋರಾಟ ನಿರತ ಕುಸ್ತಿಪಟುಗಳೇ ನಿಮ್ಮೊಂದಿಗೆ ನಾವಿದ್ದೇವೆ’ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಕುಸ್ತಿಪಟುಗಳು ಬೀದಿಯಲ್ಲಿರುವುದು ನೋವಿನ ಸಂಗತಿ. ದೇಶ ಆಪ್ಕೆ ಸಾಥ್‌ ಹೈ ಎಂಬ ಮಾತು ಸುಳ್ಳಾಗಿದೆ. ಈ ಹೋರಾಟ ಗೆಲ್ಲಬೇಕಾದರೆ ಮಹಾತ್ಮ ಗಾಂಧೀಜಿ ಅವರ ಮಾದರಿಯನ್ನು ನಾವೆಲ್ಲರೂ ಅಳವಡಿಸಿಕೊಂಡು ಸಂತ್ರಸ್ತರಿಗೆ ಬೆಂಬಲ ನೀಡಬೇಕು’ ಎಂದು ತಿಳಿಸಿದರು.

‘ಸತ್ಯ, ಅಹಿಂಸೆ, ಶಾಂತಿ, ಧರ್ಮವೆಂಬ ಗಾಂಧೀಜಿ ಅವರ ಗುಜರಾತ್‌ ಮಾದರಿ ಇಂದಿಗೂ ಪ್ರಸ್ತುತವಾಗಿದೆ. ಆದ್ದರಿಂದ, ಪ್ರತಿ ದಿನ ಗಾಂಧೀಜಿ ಅವರನ್ನು ಕೊಲ್ಲಲಾಗುತ್ತಿದೆ. ಸ್ವಾರ್ಥದ, ಪ್ರತಿಷ್ಠೆಯ, ಅಧಿಕಾರ ಲಾಲಸೆಯ, ನಿರ್ಲಜ್ಜಯ ಹಿಂಸೆಯಿಂದ ಕೂಡಿದ ಈಗಿನ ಗುಜರಾತ್‌ ಮಾದರಿ ನಮಗೆ ಬೇಕಾಗಿಲ್ಲ. ಕುಸ್ತಿಪಟುಗಳ ನ್ಯಾಯಯುತ ಹೋರಾಟ ಗೆದ್ದೇ ಗೆಲ್ಲುತ್ತದೆ. ಏಕೆಂದರೆ ರೈತ ಚಳವಳಿಯ ಆದರ್ಶಗಳು ನಮ್ಮ ಮುಂದಿವೆ’ ಎಂದರು.

ADVERTISEMENT

ಅಥ್ಲೀಟ್‌ ರೀತ್ ಅಬ್ರಾಹಂ ಮಾತನಾಡಿ, ‘ನಾನು ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟಾಗ ಹೆಣ್ಣುಮಕ್ಕಳ ಸಂಖ್ಯೆ ತೀರಾ ಕಡಿಮೆ ಇತ್ತು. ಈಗ ಕ್ರೀಡಾಕ್ಷೇತ್ರದಲ್ಲಿ ರಾಜಕೀಯ ಪ್ರವೇಶಿಸಿದ್ದರಿಂದ ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಕ್ರೀಡೆಯ ಬಗ್ಗೆ ಗೊತ್ತಿಲ್ಲದವರು ಇಂದು ಫೆಡರೇಶನ್‌ ಅಧ್ಯಕ್ಷರಾಗುತ್ತಿದ್ದಾರೆ’ ಎಂದರು.

ಎಐಎಂಎಸ್ಎಸ್ ರಾಜ್ಯ ಅಧ್ಯಕ್ಷ್ಯೆ ಅಪರ್ಣ ಬಿ. ಆರ್. ಮಾತನಾಡಿ, ‘ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಹೋರಾಟ ಒಂದು ತಿಂಗಳಿಗೆ ಕಾಲಿಟ್ಟಿದೆ. ಆದರೆ, ಆರೋಪಿ ಬ್ರಿಜ್ ಭೂಷಣ್‌ ಶರಣ್ ಸಿಂಗ್‌ ಅವರನ್ನು ಇದುವರೆಗೂ ಬಂಧಿಸಿಲ್ಲ’ ಎಂದು ಹೇಳಿದರು.

ಮಧುಲತಾ ಗೌಡರ್, ಶೋಭಾ, ಎಂ.ಎನ್. ಮಂಜುಳಾ, ಮೇರಿ ಜಾನ್‌ ಇದ್ದರು.

ಭಾರತೀಯ ಕುಸ್ತಿ ಫಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸುವಂತೆ ಎಐಎಂಎಸ್ಎಸ್‌ ಸಂಘಟನೆ ಸದಸ್ಯರು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

‘ಲೈಂಗಿಕ ದೌರ್ಜನ್ಯ ಒಂದ ಕ್ಷೇತ್ರಕ್ಕ ಸೀಮಿತವಾಗಿಲ್ಲ’

‘ಲೈಂಗಿಕ ದೌರ್ಜನ್ಯ ಕೇವಲ ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಅದು ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ’ ಎಂದು ಐಎಎಸ್‌ ಅಧಿಕಾರಿ ಪಲ್ಲವಿ ಆಕುರಾತಿ ಹೇಳಿದರು. ‘ಕಾನೂನಿನ ಮುಂದೆ ಎಲ್ಲರೂ ಸಮಾನರು ಆದರೆ ಅದು ತಲೆಕೆಳಗಾಗಿದೆ. ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದರೆ ಪ್ರಕರಣ ದಾಖಲಿಸಲು ಆರು ತಿಂಗಳು ಬೇಕಾಗುತ್ತದೆ. ಇನ್ನೂ ತನಿಖೆ ಶಿಕ್ಷೆ ನ್ಯಾಯ ದೂರದ ಮಾತು. ದೇಶಕ್ಕಾಗಿ ಬಂಗಾರದ ಪದಕಗಳನ್ನು ಗೆದ್ದ ಹೆಣ್ಣು ಮಕ್ಕಳ ಸ್ಥಿತಿ ಹೀಗಾದರೆ ಇನ್ನೂ ಸಾಮಾನ್ಯ ಹೆಣ್ಣು ಮಕ್ಕಳ ಗತಿಯೇನು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.