ಬೆಂಗಳೂರು: ‘ಯಾವುದೇ ಭಾಷೆಯಾಗಲಿ, ನಿತ್ಯದ ವ್ಯವಹಾರದಲ್ಲಿ ಸರಾಗವಾಗಿ ಬಳಸುತ್ತಿದ್ದರೆ ಮಾತ್ರ ಆ ಭಾಷೆ ಬೆಳೆಯುತ್ತದೆ’ ಎಂದು ಲೇಖಕ ಡಾ. ನಾ. ಸೋಮೇಶ್ವರ ಅಭಿಪ್ರಾಯಪಟ್ಟರು.
ನಗರದಲ್ಲಿ ಮಂಗಳವಾರ ನಿರಾಂತಕ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿದ್ದ ‘ಎಂಟನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳ’ನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ಮಿಕರು, ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ತಮ್ಮದೇ ಭಾಷೆಯಲ್ಲಿ ಸಂವಹನ ನಡೆಸಬೇಕು. ಇದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿಯಾಗುತ್ತದೆ. ಸಂಸ್ಥೆಯೂ ಬೆಳೆಯುತ್ತದೆ’ ಎಂದರು.
‘ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ತಾಂತ್ರಿಕ ಪದಗಳು, ಪಾರಿಭಾಷಿಕ ಪದಗಳನ್ನು ಕನ್ನಡದಲ್ಲಿ ಆಲೋಚಿಸಲು ಪ್ರಯತ್ನಿಸಿ’ ಎಂದು ಅವರು ಸಲಹೆ ನೀಡಿದರು.
ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಬಳಸುವ ಪರಿಕಲ್ಪನೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನಿಘಂಟು ಅಥವಾ ಶಬ್ದಕೋಶ ರೂಪದಲ್ಲಿ ಸಾಹಿತ್ಯ ಸೃಷ್ಟಿಸಬೇಕಿದೆ. ಹಾಗಾದಾಗ ಮಾತ್ರ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಬೆಳೆಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೆಂಕಟರಮಣ, ರಾಜೀವ ವೇಲೂರ್, ಮ್ಯಾಕ್ಸಿ ಎಫ್. ಫರ್ನಾಂಡಿಸ್, ಆನಂದ ಅವರಿಗೆ ‘ಮಾನವ ಸಂಪನ್ಮೂಲ ಕ್ಷೇತ್ರದ ಹಿರಿಯ ಸಾಧಕ ಪ್ರಶಸ್ತಿ- 2024’ ಹಾಗೂ ಶಿವಕುಮಾರ್ ಕೆ.ಎಂ. ವಿಶ್ವೇಶ್ವರ ಹೆಗಡೆ, ಸಂತೋಷ್ ಶೆಟ್ಟಿ ಶ್ರೀರಾಮ್ ಪಟ್ಟಾರಿ, ಕೋಮಲ ಮೂರ್ತಿ, ಶಿಲ್ಪ ಎನ್. ಅವರಿಗೆ ‘ಮಾನವ ಸಂಪನ್ಮೂಲ ಕ್ಷೇತ್ರದ ಯುವ ಸಾಧಕ ಪ್ರಶಸ್ತಿ- 2024’ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.