ADVERTISEMENT

ಸಾಂಸ್ಕೃತಿಕ ಜೀತಗಾರಿಕೆ ಒಪ್ಪಲು ಅಸಾಧ್ಯ: ಸಚಿವರಿಗೆ ತಿಳಿಹೇಳುವಂತೆ ಸಿಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 15:45 IST
Last Updated 20 ಜೂನ್ 2024, 15:45 IST
   

ಬೆಂಗಳೂರು: ‘ಅಕಾಡೆಮಿ, ಪ್ರಾಧಿಕಾರಗಳು ಹಾಗೂ ಸಾಹಿತಿಗಳ ಕುರಿತು ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಕಾಂಗ್ರೆಸ್‌ ಪಕ್ಷದ ನಿಲುವೂ ಆಗಿದೆ. ಸಾಹಿತಿ, ಕಲಾವಿದರು, ಸಂಸ್ಕೃತಿ ಚಿಂತಕರನ್ನು ಯಾವುದೇ ಪಕ್ಷದ ಅಡಿಯಾಳುಗಳಂತೆ ಕಾಣುವುದು ಸರಿಯಾದ ನಡವಳಿಕೆಯಲ್ಲ. ಇಂತಹ ಸಾಂಸ್ಕೃತಿಕ ಜೀತಗಾರಿಕೆ ಒಪ್ಪಲು ಸಾಧ್ಯವಿಲ್ಲ’ ಎಂದು ‘ಜಾಗೃತ ನಾಗರಿಕರು–ಕರ್ನಾಟಕ’ದ ಪ್ರಮುಖರು ಹೇಳಿದ್ದಾರೆ.

‘ಸಾಹಿತಿಗಳು ರಾಜಕಾರಣಿಗಳೇ, ಬಾಯಿಬಿಟ್ಟು ಹೇಳಿಕೊಳ್ಳುವುದಿಲ್ಲ ಅಷ್ಟೆ’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ  ಹೇಳಿಕೆಯನ್ನು ಖಂಡಿಸಿದ್ದಾರೆ. 

‘ಸಾಂಸ್ಕೃತಿಕ ಕ್ಷೇತ್ರ ತನ್ನ ಅಬಾಧಿತ ಗುಣದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳು ಸಂರಕ್ಷಿತವಾಗುತ್ತವೆ. ಇದು ವ್ಯಕ್ತಿಯ ಸ್ವಾಭಿಮಾನದ ಪ್ರಶ್ನೆಯಷ್ಟೇ ಅಲ್ಲ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಘನತೆ ಗೌರವಗಳನ್ನು ಒಳಗೊಂಡಿದೆ. ಹಾಗಾಗಿ, ಸಾಂಸ್ಕೃತಿಕ ಕ್ಷೇತ್ರಗಳ ವಿವಾದವನ್ನು ಕೊನೆಗೊಳಿಸಲು ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕು’ ಎಂದು ಸಂಘಟನೆಯ ಪ್ರಮುಖರಾದ ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ಎಸ್.ಜಿ. ಸಿದ್ದರಾಮಯ್ಯ, ವಿಜಯಾ, ಕೆ.ಎಸ್. ವಿಮಲಾ,  ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್‌, ಬಂಜಗೆರೆ ಜಯಪ್ರಕಾಶ್‌, ಮೀನಾಕ್ಷಿ ಬಾಳಿ, ಎನ್.ಗಾಯತ್ರಿ, ಎನ್.ಕೆ. ವಸಂತರಾಜ್‌ ಒತ್ತಾಯಿಸಿದ್ದಾರೆ.

ADVERTISEMENT

ಸಚಿವರಿಗೆ ತಿಳಿಹೇಳಿ:

ಡಿ.ಕೆ.ಶಿವಕುಮಾರ್ ಅವರ ನಡೆ ಹಾಗೂ ಹೇಳಿಕೆಯನ್ನು ಖಂಡಿಸಿ 150ಕ್ಕೂ ಅಧಿಕ ಸಾಹಿತಿಗಳು, ಲೇಖಕರು ಹಾಗೂ ಬರಹಗಾರರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಎಚ್. ಎಸ್. ಅನುಪಮಾ, ನಿರಂಜನಾರಾಧ್ಯ ವಿ.ಪಿ., ಬಸವರಾಜ ಸೂಳಿಭಾವಿ, ಡಾ.ಶ್ರೀನಿವಾಸ ಕಕ್ಕಿಲಾಯ, ಕೆ.ಫಣಿರಾಜ್‌, ಕೆ.ಪಿ. ಸುರೇಶ, ಬಿ. ಸುರೇಶ, ಕೇಸರಿ ಹರವು, ಕೆ.ವಿ. ನಾರಾಯಣ, ಚಂದ್ರಕಾಂತ ವಡ್ಡು, ಯೋಗಾನಂದ ಬಿ.ಎನ್‌., ರಹಮತ್‌ ತರೀಕೆರೆ, ನಾ. ದಿವಾಕರ, ಎಚ್.ಎಸ್. ರಾಘವೇಂದ್ರರಾವ್, ಬಿ. ಶ್ರೀನಿವಾಸ, ಸುನಂದಾ ಕಡಮೆ ಸೇರಿ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು, ಸಂಪುಟದ ಸದಸ್ಯರಿಗೆ ತಿಳಿಹೇಳಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. 

‘ಉಪಮುಖ್ಯಮಂತ್ರಿ ಅವರ ಉದ್ಧಟತನ ಹಾಗೂ ಅಧಿಕಾರದ ದರ್ಪದಿಂದ ಕೂಡಿದ ಹೇಳಿಕೆಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಮತ್ತು ಸರ್ಕಾರದ ಇತರೆ ಸಚಿವರು ಅನುಮೋದಿಸುತ್ತಾರೆಯೇ ಎಂಬುದನ್ನು ತಿಳಿಯಬಯಸುತ್ತೇವೆ. ಉಪಮುಖ್ಯಮಂತ್ರಿ ಅವರದ್ದು ಪಾಳೇಗಾರಿಕೆಯ ಮನೋಧೋರಣೆಯಾಗಿದ್ದು, ಸರ್ವಾಧಿಕಾರ ಹಾಗೂ ದರ್ಪದ ನಡೆಯಾಗಿದೆ’ ಎಂದಿದ್ದಾರೆ. 

‘ಸಾಂವಿಧಾನಿಕ ಹಾಗೂ ಪ್ರಜಾತಾಂತ್ರಿಕ ಸಂಸ್ಥೆಗಳ ಸ್ವಾಯತ್ತೆಗೆ ಧಕ್ಕೆ ತರುವಂತಹ ಅವರ ಮಾತುಗಳು, ಸಂವಿಧಾನದ ಉಳಿವಿಗಾಗಿ ಕೆಲಸ ಮಾಡುತ್ತಿರುವ ನಮ್ಮಂತಹವರಿಗೆ ನೋವನ್ನುಂಟುಮಾಡಿದೆ. ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಶೈಕ್ಷಣಿಕ ಸ್ವಾಯತ್ತ ಸಂಸ್ಥೆ ಹಾಗೂ ಅಕಾಡೆಮಿಗಳ ಸಾಂವಿಧಾನಿಕ ಪ್ರಜಾತಾಂತ್ರಿಕ ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ತಮ್ಮ ಸಂಪುಟದ ಸದಸ್ಯರಿಗೆ ತಿಳಿಹೇಳಬೇಕು’ ಎಂದು ಆಗ್ರಹಿಸಿದ್ದಾರೆ. 

ಸಾಹಿತಿಗಳ ಟೀಕೆ ಅವಕಾಶವಾದದ ಪ್ರತೀಕ: ರಮೇಶಬಾಬು

ಬೆಂಗಳೂರು: ‘ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಜೊತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಸಭೆಯನ್ನು ಕೆಲವು ಸಾಹಿತಿಗಳು ಮತ್ತು ಚಿಂತಕರು ಟೀಕಿಸುತ್ತಿರುವುದು ಅವರ ಅವಕಾಶವಾದದ ಪ್ರತೀಕ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶಬಾಬು ಟೀಕಿಸಿದ್ದಾರೆ.

‘ಕೆಲವು ಹಿರಿಯ ಸಾಹಿತಿಗಳು ಸಿದ್ಧಾಂತ ಮತ್ತು ಅಧಿಕಾರದೊಂದಿಗೆ ರಾಜಿಯಾಗದೆ, ಅಧಿಕಾರವನ್ನೂ ಬಯಸದೆ ರಾಜಕಾರಣದೊಂದಿಗೆ ಅಂತರ ಕಾಯ್ದುಕೊಂಡು ಬಂದಿದ್ದಾರೆ. ಆದರೆ, ಕೆಲವರು ಅವಕಾಶವಿರುವ ಎಲ್ಲ ಲಾಬಿಗಳನ್ನು ಮಾಡಿ ಅಧಿಕಾರ ಸಿಗದೇ ಇದ್ದಾಗ ರಾಜಕಾರಣವನ್ನು ಜರಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರನ್ನು ನೋಡಿದರೆ ದ್ರಾಕ್ಷಿ ಸಿಗದ ನರಿಯು ದ್ರಾಕ್ಷಿಯನ್ನು ಹುಳಿ ಎಂದು ಜರಿಯುವ ಕಥೆ ನೆನಪಾಗುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಡಿ.ಕೆ. ಶಿವಕುಮಾರ್ ಅವರು ನಡೆಸಿದ ಸಭೆಯು ರಾಜ್ಯದ ಸಾಂಸ್ಕೃತಿಕ ವಲಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕೂಡಿತ್ತು. ಅದನ್ನು ಟೀಕಿಸುವ ನೈತಿಕತೆಯನ್ನು ಈ ಲೇಖಕರು ಮತ್ತು ಸಾಹಿತಿಗಳು ಕಳೆದುಕೊಂಡಿದ್ದಾರೆ. ಸಾಹಿತಿಗಳು ಹಿತ್ತಲ ಬಾಗಿಲಿನ ಸಂಸ್ಕೃತಿಯನ್ನು ಕೈಬಿಟ್ಟು, ಮನೆಯ ಮುಂಬಾಗಿಲಿನ ಮುಖಾಂತರ ಪ್ರವೇಶ ಮಾಡುವ ಸಂಸ್ಕೃತಿಯನ್ನು ಪಾಲಿಸಲಿ’ ಎಂದಿದ್ದಾರೆ.

‘ಸಾಹಿತಿಗಳು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರಾಗಿದ್ದಾರೆ. ಆದರೆ, ಅಂತಹ ಅನಿಸಿಕೆ ಅಥವಾ ಟೀಕೆಗಳು ಆರೋಗ್ಯಕರ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಅಧಿಕಾರದೊಂದಿಗೆ ಎಂದೂ ರಾಜಿಯಾಗದ ಸಾಹಿತಿ, ಲೇಖಕ ದೇವನೂರ ಮಹಾದೇವರಂತಹ ಅಪರೂಪದ ವ್ಯಕ್ತಿಗಳು ಸರ್ಕಾರಗಳನ್ನು, ರಾಜಕಾರಣಿಗಳನ್ನು ಟೀಕಿಸುವ ನೈತಿಕತೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಅವರ ಸಾಲಿನಲ್ಲಿ ಬರುವವರನ್ನು ಹೊರತುಪಡಿಸಿ ಉಳಿದವರಿಗೆ ಸರ್ಕಾರ ಅಥವಾ ಕಾಂಗ್ರೆಸ್ ಪಕ್ಷ ಅಥವಾ ಡಿ.ಕೆ. ಶಿವಕುಮಾರ್ ಅವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.