ADVERTISEMENT

ಭಕ್ತಿಯ ಜತೆಗೆ ಜ್ಞಾನವೂ ಅಗತ್ಯ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 15:47 IST
Last Updated 1 ಸೆಪ್ಟೆಂಬರ್ 2024, 15:47 IST
ಮೈಸೂರು ಬಿಜೆಪಿ ಪಕ್ಷ ಆಯೋಜಿಸಿದ್ದ ನೂತನವಾಗಿ ಆಯ್ಕೆಯಾದ ಮೈಸೂರು - ಕೊಡಗು ಲೋಕಸಭಾ ಅಭ್ಯರ್ಥಿಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. ಪ್ರಜಾವಾಣಿ ಚಿತ್ರ.
Yaduveer Krishnadatta Chamaraja Wadiyar
ಮೈಸೂರು ಬಿಜೆಪಿ ಪಕ್ಷ ಆಯೋಜಿಸಿದ್ದ ನೂತನವಾಗಿ ಆಯ್ಕೆಯಾದ ಮೈಸೂರು - ಕೊಡಗು ಲೋಕಸಭಾ ಅಭ್ಯರ್ಥಿಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. ಪ್ರಜಾವಾಣಿ ಚಿತ್ರ. Yaduveer Krishnadatta Chamaraja Wadiyar   

ಬೆಂಗಳೂರು: ‘ದೇವಸ್ಥಾನಗಳಿಗೆ ಹೋಗುವಾಗ ಅಥವಾ ಹೋದಾಗ ಅಲ್ಲಿನ ವಾಸ್ತುಶಿಲ್ಪ, ಆಚರಣೆ, ಇತಿಹಾಸವನ್ನು ತಿಳಿದುಕೊಳ್ಳಬೇಕು. ಭಕ್ತಿಯ ಜತೆಗೆ ಜ್ಞಾನವೂ ಅಗತ್ಯ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸಹಯೋಗದಲ್ಲಿ ‘ಅಭಿಜ್ಞಾನ’ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಾ.ಕೃ. ರಾಮಚಂದ್ರ ರಾವ್ ಅವರ ‘ತಿರುಪತಿ ತಿಮ್ಮಪ್ಪ’ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು. 

‘ದೇವಸ್ಥಾನಗಳಲ್ಲಿ ಸಿಗದ ಮಾಹಿತಿ ಪುಸ್ತಕಗಳಲ್ಲಿ ದೊರೆಯುತ್ತಿರುವುದು ನಮ್ಮ ಸೌಭಾಗ್ಯ. ದೇವಸ್ಥಾನಗಳಿಗೆ ಹೋದಾಗ ಭಕ್ತಿಯಿಂದ ದೇವರ ದರ್ಶನ ಮಾಡುವ ಜತೆಗೆ ಅಲ್ಲಿನ ವಿಶೇಷತೆ ಬಗ್ಗೆಯೂ ತಿಳಿದುಕೊಳ್ಳಬೇಕು. ಈ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು’ ಎಂದರು. 

ADVERTISEMENT

ಬೇಲಿಮಠದ ಶಿವರುದ್ರ ಸ್ವಾಮೀಜಿ, ‘ನಾವು ಮೌನ ಧ್ವನಿಯಲ್ಲಿ ಭಗವಂತನನ್ನು ಕಾಣಬೇಕು. ಈ ಕೃತಿಯು ಸ್ಪಷ್ಟ ಮಾರ್ಗದರ್ಶಕ ಸೂತ್ರವಾಗಿದ್ದು, ಭಗವಂತನ ವಾಸ್ತವ ಸತ್ಯವನ್ನು ಕಟ್ಟಿಕೊಟ್ಟಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕೃತಿ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಶಲ್ವಪಿಳ್ಳೈ ಅಯ್ಯಂಗಾರ್, ‘ತಿರುಪತಿಯ ಸಮಗ್ರ ಇತಿಹಾಸ, ಜಾನಪದ, ನಂಬಿಕೆ, ಗುಡಿ ಎಲ್ಲದರ ಬಗ್ಗೆ ತಿಳಿಸಲಾಗಿದೆ. ತಿರುಪತಿಯ ಬಗ್ಗೆ ಅಧ್ಯಯನ ಮಾಡಲು ಇದು ಆಕರ ಗ್ರಂಥವಾಗಲಿದೆ’ ಎಂದರು. 

ರಾಮಚಂದ್ರ ರಾವ್ ಅವರ ಜೀವನ ಮತ್ತು ಸಾಧನೆ ಬಗ್ಗೆ ವಿದ್ವಾಂಸ ಟಿ.ವಿ. ವೆಂಕಟಾಚಲ ಶಾಸ್ತ್ರಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.