ADVERTISEMENT

ಯಲಹಂಕ: ವಿದ್ಯುತ್ ಸ್ಥಾವರ ಘಟಕ ಸ್ಥಗಿತಕ್ಕೆ ಆಗ್ರಹ

ಹೊಗೆ, ಶಬ್ಧದಿಂದ ಬೇಸತ್ತ ಸ್ಥಳೀಯ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 19:35 IST
Last Updated 7 ಮಾರ್ಚ್ 2024, 19:35 IST
ಘಟಕದ ಎದುರು ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿಗಳು
ಘಟಕದ ಎದುರು ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿಗಳು   

ಯಲಹಂಕ: ಸ್ಥಗಿತಗೊಂಡಿದ್ದ ಪುಟ್ಟೇನಹಳ್ಳಿ ಸಮೀಪದ ಕೆಪಿಸಿ ಅನಿಲ ವಿದ್ಯುತ್‌ ನಿಗಮದ ಯಲಹಂಕ ಸಂಯುಕ್ತ ಆವರ್ತ ವಿದ್ಯು ತ್‌ ಸ್ಥಾವರ ಘಟಕ ಬುಧವಾರದಿಂದ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದ್ದು, ಘಟಕದಿಂದ ಹೊರ ಹೊಮ್ಮುತ್ತಿರುವ ಹೊಗೆ ಮತ್ತು ಭಾರಿ ಶಬ್ದ ಸುತ್ತಲಿನ ನಿವಾಸಿಗಳಿಗೆ ತೀವ್ರ ತೊಂದರೆಯನ್ನುಟುಮಾಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಶಬ್ದ ಮತ್ತು ಹೊಗೆಯಿಂದ ಬೇಸತ್ತ ನಿವಾಸಿಗಳು ಗುರುವಾರ ರಾತ್ರಿ ಘಟಕದ ಮುಂಭಾಗ ಜಮಾಯಿಸಿ, ಘಟಕದ ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಘಟಕದಿಂದ ಉಂಟಾಗುತ್ತಿರುವ ಶಬ್ದ ಮತ್ತು ವಾಯುಮಾಲಿನ್ಯದಿಂದ  ಪುಟ್ಟೇನಹಳ್ಳಿ, ಕೆಂಚೇನಹಳ್ಳಿ, ಹಾರೋಹಳ್ಳಿ, ಅನಂತಪುರ ಗೇಟ್‌, ಬಾಲಾಜಿ ಬಡಾವ ಣೆ ಸೇರಿದಂತೆ ಹಲವಾರು ಅಪಾರ್ಟ್‌ಮೆಂಟ್‌ಗಳು ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ನಿವಾಸಿಗಳು ದೂರಿದರು.

ADVERTISEMENT

ಈ ವೇಳೆ ಮಾತನಾಡಿದ  ಬಾಲಾಜಿ ಬಡಾವಣೆ ನಿವಾಸಿ ಜಿ.ಎಂ.ಶಿರಹಟ್ಟಿ, ‘ಘಟಕ ಹೊರಸೂಸುವ ಅಪಾಯಕಾರಿ ಹೊಗೆ ಸುಮಾರು ಎರಡು ಕಿಲೋಮೀಟರ್‌ ದೂರದವರೆಗೆ ಆವರಿಸುತ್ತಿದೆ. ಇದರಿಂದ ಜನರ ಆರೋಗ್ಯಕ್ಕೆ ತೊಂದರೆಯಾಘುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಘಟಕದ ಕಾರ್ಯವನ್ನು ಸ್ಥಗಿತಗೊಳಿಸಬೇಕು’ ಎಂದು  ಆಗ್ರಹಿಸಿದರು.

ಸ್ಥಳೀಯ ನಿವಾಸಿ ಹರೀಶ್‌ ‘ರಾಸಾಯನಿಕಯುಕ್ತ ಹೊಗೆ ಮತ್ತು ಭಾರೀ ಶಬ್ದ ಸುತ್ತಮುತ್ತಲ ಪ್ರದೇಶದ ವಾತಾವರಣ ಕಲುಷಿತಗೊಳಿಸುತ್ತಿದೆ.  ಶಬ್ದದಿಂದ ಗಾಬರಿಗೊಂಡು ಪುಟ್ಟೇನಹಳ್ಳಿ ಮತ್ತು ಯಲಹಂಕ ಕೆರೆಯಲ್ಲಿ ನೆಲಿಸಿದ್ದ ವಿವಿ ಧ ಜಾತಿಯ ಪಕ್ಷಿಗಳೆಲ್ಲಾ ಬೇರೆಡೆಗೆ ಸ್ಥಳಾಂತರಗೊಂಡಿವೆ‘ ಎಂದು ದೂರಿದರು.

ಪ್ರಾಯೋಗಿಕ ಹಂತದಲ್ಲೇ ಇಷ್ಟು ಸಮಸ್ಯೆಯಾಗುತ್ತಿದೆ.  ಇನ್ನು ಪೂರ್ಣಪ್ರಮಾಣದಲ್ಲಿ ಘಟಕ  ಆರಂಭವಾದರೆ ವಾತಾವರಣ ಸಂಪೂರ್ಣವಾಗಿ  ಕಲುಷಿತಗೊಳ್ಳಲಿದೆ. ಆದ್ದರಿಂದ ಕೂಡಲೇ ಘಟಕದ ಕಾರ್ಯವನ್ನು ಬಂದ್‌ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಯಲಹಂಕ ಸಂಯುಕ್ತ ಆವರ್ತ ವಿದ್ಯುತ್‌ ಸ್ಥಾವರದಿಂದ ಹೊರಬರುತ್ತಿರುವ ದಟ್ಟವಾದ ಹೊಗೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.