ಯಲಹಂಕ: ಹೆಸರುಘಟ್ಟ ಮತ್ತು ದಾಸನಪುರ ಹೋಬಳಿಗಳ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ₹ 40 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಬ್ಯಾಲಕೆರೆ ಗ್ರಾಮದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಪ್ರಧಾನಮಂತ್ರಿಗಳ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕ್ಷೇತ್ರದ ತರಬನಹಳ್ಳಿಯಿಂದ ಬ್ಯಾಲಕೆರೆ ಗಡಿಯವರೆಗೆ ಮತ್ತು ಚೊಕ್ಕನಹಳ್ಳಿಯಿಂದ ಬುಡಮನಹಳ್ಳಿಯವರೆಗೆ ₹2.90 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ದಾಸನಪುರ ಹೋಬಳಿಯಲ್ಲಿ ಬಿಡಿಎ ಅನುದಾನದಡಿಯಲ್ಲಿ ಸುಮಾರು ₹.37 ಕೋಟಿ ವೆಚ್ಛದಲ್ಲಿ 18 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಮತ್ತು ಒಳಚರಂಡಿ ಕಾಮಗಾರಿ ಹಾಗೂ ಬಯಲುಕೊನೇನಹಳ್ಳಿಯಲ್ಲಿ ₹30 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಸೇರಿ ಒಟ್ಟು ₹40 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಕಸಘಟ್ಟಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲರಾಜ್, ಮಾಜಿ ಅಧ್ಯಕ್ಷೆ ಮಂಜುಳಾ ವೆಂಕಟೇಶ್, ಬಿಜೆಪಿ ಮುಖಂಡರಾದ ಎಸ್.ಎನ್. ರಾಜಣ್ಣ, ಎಚ್.ಬಿ.ಹನುಮಯ್ಯ, ಡಿ.ಜಿ.ಅಪ್ಪಯಣ್ಣ, ಸತೀಶ್ ಕಡತನಮಲೆ, ಮಂಜುನಾಥರೆಡ್ಡಿ, ಬಾಬು, ನಾಗದಾಸನಹಳ್ಳಿ ಮುನೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.