ADVERTISEMENT

ಯಲಹಂಕ ಸಂಯೋಜಿತ ಆವರ್ತ ಸ್ಥಾವರ: 370 ಮೆ.ವಾ ವಿದ್ಯುತ್ ಉತ್ಪಾದನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 0:08 IST
Last Updated 14 ಮಾರ್ಚ್ 2024, 0:08 IST
ಯಲಹಂಕದಲ್ಲಿರುವ ಸಂಯೋಜಿತ ಆವರ್ತ ವಿದ್ಯುತ್ ಸ್ಥಾವರ
ಯಲಹಂಕದಲ್ಲಿರುವ ಸಂಯೋಜಿತ ಆವರ್ತ ವಿದ್ಯುತ್ ಸ್ಥಾವರ   

ಬೆಂಗಳೂರು: ಸುಪ್ರೀಂ ಕೋರ್ಟ್ ಅನುಮತಿಯೊಂದಿಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗಾದಲ್ಲಿ ಯಲಹಂಕದಲ್ಲಿ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿರುವ ಯಲಹಂಕ ಸಂಯೋಜಿತ ಆವರ್ತ ವಿದ್ಯುತ್ ಸ್ಥಾವರ (ವೈಸಿಸಿಪಿ) ಮೇ ತಿಂಗಳಿನಿಂದ ನಿತ್ಯ 370 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಸಜ್ಜಾಗುತ್ತಿದೆ.

ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳ ವಿರೋಧದ ನಡುವೆ ಘಟಕ ಕಾರ್ಯಾರಂಭ ಮಾಡಿದೆ. ಕರ್ನಾಟಕ ವಿದ್ಯುತ್ ನಿಗಮ ಸ್ಥಾಪಿಸಿರುವ ಈ ವೈಸಿಸಿಪಿ ಘಟಕದಲ್ಲಿ ಅನಿಲ ಹಾಗೂ ಹಬೆಯಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇವೆರಡೂ ಸಂಯೋಜಿತಗೊಂಡು ಕೆಪಿಟಿಸಿಎಲ್‌ ಗ್ರಿಡ್‌ಗೆ ಪೂರೈಕೆಯಾಗುತ್ತದೆ.

ಘಟಕದ ಕಾರ್ಯಾಚರಣೆ ಕುರಿತು ಮಂಗಳವಾರ ಘಟಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ವಿವರಿಸಿದ ಕೆಪಿಸಿಎಲ್ ಅಧಿಕಾರಿಗಳು,‘ಸದ್ಯ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಘಟಕ ಮಾತ್ರ ಚಾಲನೆಯಲ್ಲಿದೆ’ ಎಂದರು. ಘಟಕದ ಕಾರ್ಯಾಚರಣೆ, ಸ್ಥಾವರದ ಅನಿಲ ಟರ್ಬೈನ್, ಬಾಯ್ಲರ್ ಟರ್ಬೈನ್, ಘಟಕ ನಿಯಂತ್ರಣ ಕೊಠಡಿ, ಕೂಲಿಂಗ್ ಟವರ್, 60 ಮೀಟರ್ ಎತ್ತರದ ಚಿಮಣಿ, ಸಂಸ್ಕರಿಸಿದ ತ್ಯಾಜ್ಯ ನೀರು ಸಂಗ್ರಹಣೆಯ ಹೊಂಡ ಮತ್ತಿತರ ಭಾಗಗಳನ್ನು ಕಾರ್ಯಪಾಲಕ ಎಂಜಿನಿಯರ್ ಮಹಾದೇವಪ್ರಸಾದ್‌ ಪರಿಚಯಿಸಿದರು.

ADVERTISEMENT

‘ಸುಪ್ರೀಂ ಕೋರ್ಟ್ ಆದೇಶದಂತೆ ಘಟಕವು ಎಲ್ಲ ರೀತಿಯಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶಬ್ದ ಮಾಲಿನ್ಯದ ಮೇಲೆ ನಿಗಾ ಇಡಲು ಘಟಕದಲ್ಲಿ ಮೂರು ಕಡೆ ‘ಶಬ್ದ ಮಾಪಕ’ ಗಳನ್ನು ಅಳವಡಿಸಲಾಗಿದ್ದು, ವಾಸ್ತವಿಕ ಸಮಯದ ಮಾಪನ ದಾಖಲಾಗುತ್ತಿದೆ. ಎಲ್ಲವೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇರವಾಗಿ ರವಾನೆಯಾಗುತ್ತದೆ. ಜೊತೆಗೆ, ಕೆಎಸ್‌ಪಿಬಿಸಿ,//// ತನ್ನದೇ ಸಂಚಾರಿ ವಾಹನದ ಮೂಲಕ ಘಟಕದ ಸುತ್ತಲಿನ ವಾತಾವರಣದ ಮಾಹಿತಿಯನ್ನೂ ಸಂಗ್ರಹಿಸುತ್ತಿದೆ’ ಎಂದು ಕೆಪಿಸಿಎಲ್‌ನ ಎಂಜಿನಿಯರ್‌ಗಳು ವಿವರಿಸಿದರು.

‘ಸುಪ್ರೀಂ ಕೋರ್ಟ್ 2023ರ ನವೆಂಬರ್ 8ರಂದು ಘಟಕದ ಪುನರಾರಂಭಕ್ಕೆ ಅನುಮತಿ ನೀಡಿದೆ. ನಂತರದ ಐದೂವರೆ ತಿಂಗಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲ ಮಾಹಿತಿ ಸಂಗ್ರಹಿಸಿ, ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ. ಜುಲೈ 2024ರಂದು ನ್ಯಾಯಾಲಯ ಇದನ್ನು ಪರಿಶೀಲಿಸಲಿದೆ’ ಎಂದು ಅವರು ವಿವರಿಸಿದರು.

ಹಿಂದೆ ಡೀಸೆಲ್ ಆಧರಿತ ವಿದ್ಯುತ್‌ ಉತ್ಪಾದನಾ ಘಟಕವಾಗಿತ್ತು. ಮಾಲಿನ್ಯದ ಕಾರಣದಿಂದ ಆಗ ಸ್ಥಳೀಯರು ಪ್ರತಿಭಟಿಸಿದ್ದರು. ಇದರಿಂದ ಘಟಕ ಸ್ಥಗಿತಗೊಂಡಿತ್ತು. ‘ಈಗ ಗೃಹ ಬಳಕೆಯ ಅನಿಲಕ್ಕೆ ಪರ್ಯಾಯವಾದ ಆರ್‌ಎಲ್‌ಎನ್‌ಜಿ (ರಿಗ್ಯಾಸಿಫೈಡ್ ಲಿಕ್ವಿಫೈಡ್‌ ನ್ಯಾಚುರಲ್ ಗ್ಯಾಸ್) ಬಳಸಿ ವಿದ್ಯುತ್ ಉತ್ಪಾದಿಸುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಗಣನೀಯವಾಗಿ ಸುಧಾರಣೆ: ‘ಘಟಕದಿಂದ ಹೊಮ್ಮುತ್ತಿರುವ ಹೊಗೆ ಮತ್ತು ಶಬ್ದದ ಬಗ್ಗೆ ಇತ್ತೀಚೆಗೆ ಸ್ಥಳೀಯರು ಆಕ್ಷೇಪಿಸಿದ್ದರು. ಈ ಸಮಸ್ಯೆ ತಾತ್ಕಾಲಿಕ. ಪ್ರಾಯೋಗಿಕ ಹಂತದ ನಂತರ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಲಿದೆ. ಶಬ್ದದ ಪ್ರಮಾಣ ಕಡಿಮೆಯಾಗಲಿದೆ‘ ಎಂದು ಕೆಪಿಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದರು.

‘ಸದ್ಯ ಗ್ಯಾಸ್‌ ಟರ್ಬೈನ್ ಚಾಲನೆಯಾಗಿದೆ. ಇದರಿಂದ ಶಬ್ದ ಹೆಚ್ಚಿದೆ. 30ರಿಂದ 45 ದಿನಗಳು ಮಾತ್ರ ಪರಿಸ್ಥಿತಿ ಹೀಗಿರಲಿದೆ. ಇದು ಸಂಯೋಜಿತ ಆವರ್ತ ಸ್ಥಾವರವಾಗಿರುವುದರಿಂದ ಒಮ್ಮೆ ಸ್ಟೀಮ್ ಟರ್ಬೈನ್ ಆರಂಭವಾದರೆ, ಶಬ್ದ ಕಡಿಮೆಯಾಗುತ್ತದೆ’ ಎಂದು ಕೆಪಿಸಿಎಲ್‌ ತಾಂತ್ರಿಕ ನಿರ್ದೇಶಕ ದಿವಾಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.