ಬೆಂಗಳೂರು: ‘ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ನಡೆಸಿರುವ ಕಾಮಗಾರಿಗಳಲ್ಲಿ ನೂರಾರು ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್‌ನ ಪಿ.ಆರ್.ರಮೇಶ್ ಆರೋಪಿಸಿದರು.
‘ಈ ಬಗ್ಗೆ ತನಿಖೆ ನಡೆಸುವಂತೆ ಈಗಾ ಗಲೇ ಎಸಿಬಿ, ಲೋಕಾಯುಕ್ತ ಸೇರಿದಂತೆ ಹಲವು ತನಿಖಾ ಸಂಸ್ಥೆಗಳಿಗೆ ದೂರು ನೀಡಲಾಗಿದೆ’ ಎಂದು ತಿಳಿಸಿದರು.
ಪಕ್ಷದ ಮುಖಂಡರ ಜೊತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್. ರಮೇಶ್ ತಮ್ಮ ಆಪ್ತರನ್ನು ಮುಂದಿಟ್ಟುಕೊಂಡು ಈ ಅಕ್ರಮಗಳನ್ನು ನಡೆಸಿದ್ದಾರೆ. ಇದರ ಹಿಂದೆ ಪದ್ಮನಾಭನಗರ ಶಾಸಕ ಹಾಗೂ ಸಚಿವ ಆರ್. ಅಶೋಕ ಅವರ ಕೈವಾಡವಿದೆ. ಅಶೋಕ ಅವರ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಮಟ್ಟದ ಅಕ್ರಮ ನಡೆಯಲು ಸಾಧ್ಯವಿಲ್ಲ’ ಎಂದು ದೂರಿದರು.
₹ 636 ಕೋಟಿ ಅಕ್ರಮ: ಪದ್ಮನಾಭನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 7 ವಾರ್ಡ್‌ಗಳಿವೆ. ಕಳೆದ 4–5 ವರ್ಷಗಳಲ್ಲಿ ಈ ಕ್ಷೇತ್ರಗಳಿಗೆ ₹ 636 ಕೋಟಿ ಅನುದಾನ ನೀಡಲಾಗಿದೆ. ಆದರೆ, ಇಲ್ಲಿನ ಕಾಮಗಾರಿಗಳನ್ನು ಬೇನಾಮಿ ಹೆಸರಿನಲ್ಲಿ ಗುತ್ತಿಗೆ ನೀಡಲಾಗಿದೆ. ಎನ್.ಆರ್. ರಮೇಶ್ ಆಪ್ತರಾದ ಸತೀಶ್ ಮತ್ತು ಮಂಜುನಾಥ್ ಎಂಬವವರು ಕಾನೂನುಬಾಹಿರವಾಗಿ ಗುತ್ತಿಗೆ ಪಡೆದುಕೊಂಡಿದ್ದಾರೆ. ಎಲ್ಲರೂ ಸೇರಿಕೊಂಡು ನೂರಾರು ಕೋಟಿ ಅಕ್ರಮ ನಡೆಸಿದ್ದಾರೆ’ ಎಂದು ರಮೇಶ್ ಗಂಭೀರ ಆರೋಪ ಮಾಡಿದರು.
‘ಯಡಿಯೂರಿನಲ್ಲಿ ಸಮುದಾಯ ಭವನ ನಿರ್ಮಿಸಲು ₹ 5.50 ಕೋಟಿಯ ಟೆಂಡರ್ ನೀಡಲಾಗಿದ್ದು, ಎನ್.ಆರ್. ರಮೇಶ್ ಬೇನಾಮಿ ಹೆಸರಿನಲ್ಲಿ ಗುತ್ತಿಗೆ ನೀಡಿದ್ದಾರೆ. ಒಂದೇ ಕಾಮಗಾರಿಯನ್ನು ಮೂರು ಕಾಮಗಾರಿಗಳಾಗಿ ವಿಭಜಿಸಿ ಕಾನೂನು ವಿರುದ್ಧವಾಗಿ ಟೆಂಡರ್ ನೀಡಲಾಗಿದ್ದು, ಸತೀಶ್ ಈ ಟೆಂಡರ್ ಪಡೆದಿದ್ದಾರೆ. ಒಂದು ಕಾಮಗಾರಿಗೆ ಹಲವು ರೀತಿಯ ಲೆಕ್ಕ ಪರಿಶೋಧನೆಗಳಾಗಬೇಕು. ಆದರೆ, ಈ ಕಾಮಗಾರಿಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ’ ಎಂದೂ ಅವರು ಆರೋಪಿಸಿದರು.
‘ಬೇನಾಮಿ ಹೆಸರಿನಲ್ಲಿ ಎನ್. ಆರ್. ರಮೇಶ್ 100 ಕಾಮಗಾರಿಗಳನ್ನು ಮಾಡಿದ್ದರೆ, ಸತೀಶ್ 64 ಕಾಮಗಾರಿಗಳನ್ನು ಪಡೆದುಕೊಂಡಿದ್ದಾರೆ. ಈ ರೀತಿ ಕಾಮಗಾರಿಗಳ ಗುತ್ತಿಗೆಯನ್ನು ಈ ನಿರ್ದಿಷ್ಟ ವ್ಯಕ್ತಿಗಳೇ ಪಡೆಯಲು ಹೇಗೆ ಸಾಧ್ಯ’ ಎಂದು ರಮೇಶ್ ಪ್ರಶ್ನಿಸಿದರು.
‘ಇವರು ಅಧಿಕಾರಿಗಳನ್ನು ಹೆದರಿಸಿ ಗುತ್ತಿಗೆ ಪಡೆದಿದ್ದಾರೆ. ಇವರು ಆರ್‌ಟಿಐ ಕಾರ್ಯಕರ್ತರನ್ನೂ ಬೆದರಿಸುತ್ತಾರೆ’ ಎಂದೂ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.