ಯಲಹಂಕ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಳ್ಳಾಳಸಂದ್ರದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ‘ಪೋಷಣ್ ಮಾಸಾಚರಣೆ’ ಕಾರ್ಯಕ್ರಮಕ್ಕೆ ಇಲಾಖೆಯ ನಿರ್ದೇಶಕ ಸಿದ್ದೇಶ್ವರ್ ಎನ್. ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಭಾಗವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೇ, ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳ ಮೂಲಕ ಗರ್ಭಿಣಿಯರು, ತಾಯಂದಿರಲ್ಲಿ ಪೌಷ್ಟಿಕ ಆಹಾರ ಸೇವನೆ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು. ‘ನಿತ್ಯ ಮಗುವಿಗೆ ಆಹಾರ ನೀಡುವ ವಿಧಾನ, ತಾಯಿಯ ಎದೆಹಾಲಿನ ಪ್ರಾಮುಖ್ಯ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಇತರೆ ಉಪ ಆಹಾರಗಳನ್ನು ನೀಡುವ ವಿಧಾನಗಳ ಬಗ್ಗೆ ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾಯಂದಿರಿಗೆ ಸೀಮಂತ ಹಾಗೂ ಮಗುವಿಗೆ ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಲಾಯಿತು. ‘ತಾಯಿಯ ಹೆಸರಿನಲ್ಲಿ ಒಂದು ಗಿಡ’ ನೆಡುವ ಅಭಿಯಾನವೂ ನಡೆಯಿತು. ಪೌಷ್ಟಿಕ ಆಹಾರಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು.
ಇಲಾಖೆಯ ಉಪನಿರ್ದೇಶಕ ಡಾ.ಎಸ್.ಸಿದ್ದರಾಮಣ್ಣ, ಬೆಂಗಳೂರು ಉತ್ತರ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಕುಂತಲಾದೇವಿ, ನಿರೂಪಣಾ ಅಧಿಕಾರಿ ಸುಮಂಗಲಾ ಮಾಲಾಪುರ, ಸ್ಥಳೀಯ ಮುಖಂಡರಾದ ಚಂದ್ರೇಗೌಡ, ನಾಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.