ಬೆಂಗಳೂರು: ‘ನಮ್ಮ ಮೆಟ್ರೊ’ ಹಳದಿ ಮಾರ್ಗದಲ್ಲಿ (ರೀಚ್–5) ಬಹುತೇಕ ಪರೀಕ್ಷೆಗಳನ್ನು ಪೂರ್ಣಗೊಂಡಿದ್ದು, ಮೂರು ರೈಲುಗಳೊಂದಿಗೆ ಜನವರಿಯಲ್ಲಿ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಚಾಲಕ ರಹಿತ ಚಾಲನಾ ಎಂಜಿನ್ ಹೊಂದಿರುವ ಮೆಟ್ರೊ ಇದೇ ಮಾರ್ಗದಲ್ಲಿ ಸಂಚರಿಸಲಿದ್ದು, ಆರಂಭದ ಎರಡು ವರ್ಷ ಚಾಲಕರ ಕಣ್ಗಾವಲು ಇರಲಿದೆ.
18.82 ಕಿ.ಮೀ. ಉದ್ದದ ಆರ್.ವಿ. ರಸ್ತೆ–ಬೊಮ್ಮಸಂದ್ರದವರೆಗಿನ ಈ ಮಾರ್ಗದಲ್ಲಿ ಸಿವಿಲ್ ಮತ್ತು ಸಿಸ್ಟಂ ಕಾಮಗಾರಿಗಳು ಶೇ 99ರಷ್ಟು ಪೂರ್ಣಗೊಂಡಿವೆ. ಜೂನ್‌ನಿಂದ ಸುಮಾರು ಮೂರು ತಿಂಗಳು ವಿವಿಧ ತಂತ್ರಜ್ಞರು ಪರೀಕ್ಷೆ ನಡೆಸಿದ್ದರು. ಚಾಲಕ ರಹಿತ ಎಂಜಿನ್ ಕೋಚ್‌ನಲ್ಲಿ ಸಂಚರಿಸಿ ಟ್ರ್ಯಾಕ್ಷನ್ ಮತ್ತು ಬ್ರೇಕಿಂಗ್ ಪರೀಕ್ಷೆ ಮಾಡಿದ್ದರು.
ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೊಸಿಸ್ ಫೌಂಡೇಷನ್ (ಕೋಣಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬಿರಿಟೇನ ಅಗ್ರಹಾರ, ಹೊಸರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ. ರಸ್ತೆ ನಿಲ್ದಾಣಗಳವರೆಗೆ ಪ್ರೊಟೊ ಟೈಪ್ (ಮೂಲ ಮಾದರಿ) ಕೋಚ್ ರೈಲು ಸಂಚರಿಸಿ ವಿವಿಧ ಪರೀಕ್ಷೆಗಳನ್ನು ನಡೆಸಿತ್ತು.
ಈ ಪರೀಕ್ಷೆಗಳು ಯಶಸ್ವಿಯಾದ ಬಳಿಕ ಸೆಪ್ಟೆಂಬರ್‌ನಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರದ ಮೂಲಕ ಪರೀಕ್ಷೆಗಳನ್ನು ಆರಂಭಿಸಿತ್ತು. ರೋಲಿಂಗ್ ಸ್ಟಾಕ್ (ರೈಲು) ತಜ್ಞರು, ಹಳಿ ತಂತ್ರಜ್ಞರು, ಬ್ರೇಕ್ ತಂತ್ರಜ್ಞರು, ವಿವಿಧ ತಾಂತ್ರಿಕ ಪರಿಣಿತರ ತಂಡ ಈ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ.
ಡಿಸೆಂಬರ್‌ನಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಶಾಸನಬದ್ಧ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಸುರಕ್ಷತಾ ಆಯುಕ್ತರು ತಪಾಸಣೆ ನಡೆಸಿದ ಬಳಿಕ ವಾಣಿಜ್ಯ (ಸಾರ್ವಜನಿಕ) ಸಂಚಾರಕ್ಕೆ ಅನುಮತಿ ನೀಡಲಿದ್ದಾರೆ. ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಗದಿಪಡಿಸಿದ ದಿನ ಸಾರ್ವಜನಿಕ ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕೋಚ್ ಕೊರತೆ
ಈ ಮಾರ್ಗಕ್ಕೆ ಒಟ್ಟು 15 ಕೋಚ್‌ಗಳು (ರೈಲು) ಬೇಕಿವೆ. 15 ನಿಮಿಷಕ್ಕೊಂದು ರೈಲು ಸಂಚರಿಸಲು 8 ಕೋಚ್‌ಗಳ (ಆರು ಬೋಗಿಗಳ ಒಂದು ರೈಲು ಸೆಟ್–ಒಂದು ಕೋಚ್) ಅವಶ್ಯಕತೆ ಇದೆ. ಆದರೆ ಕೋಚ್‌ಗಳ ಪೂರೈಕೆಯಲ್ಲಿ ವಿಳಂಬ ಆಗಿರುವುದರಿಂದ 3 ಕೋಚ್‌ಗಳನ್ನು ಇಟ್ಟುಕೊಂಡು ಸಂಚಾರ ಆರಂಭಿಸಲಾಗುವುದು. ಪ್ರತಿ 30 ನಿಮಿಷಕ್ಕೊಂದು ರೈಲು ಸಂಚರಿಸಲಿದೆ ಎಂದು ‘ನಮ್ಮ ಮೆಟ್ರೊ’ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಟಿಆರ್‌ಎಸ್‌ಎಲ್ ಸಂಸ್ಥೆಯಿಂದ 2025ರ ಮಾರ್ಚ್‌ನಿಂದ ಪ್ರತಿ ತಿಂಗಳು ಎರಡು ಕೋಚ್‌ಗಳು ಪೂರೈಕೆ ಆಗಲಿವೆ. ಹಂತ ಹಂತವಾಗಿ ಪ್ರಯಾಣದ ಆವರ್ತವನ್ನು ಕಡಿಮೆಗೊಳಿಸಲಾಗುವುದು. ಈ ಮಾರ್ಗಕ್ಕೆ ಅಗತ್ಯ ಇರುವ ಎಲ್ಲ ಕೋಚ್‌ಗಳು ಆಗಸ್ಟ್ ಒಳಗೆ ಲಭ್ಯ ಇರಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.