ಬೆಂಗಳೂರು: ಸುಸಜ್ಜಿತ ಕಟ್ಟಡ, ಶಸ್ತ್ರಚಿಕಿತ್ಸಾ ವಿಭಾಗ, ತೀವ್ರ ನಿಗಾ ಘಟಕ, ತುರ್ತು ಸೇವೆ ಹಾಗೂ ಪ್ರಯೋಗಾಲಯ ವಿಭಾಗ, ಹೊಸದಾಗಿ ಖರೀದಿಸಿದ್ದ ಹಾಸಿಗೆಗಳು, ಸ್ತ್ರೀರೋಗ ತಜ್ಞರು ಹಾಗೂ ಶುಶ್ರೂಷಕಿಯರಿಗೆ ಪ್ರತ್ಯೇಕ ಕೊಠಡಿ ಹೊಂದಿದ್ದ ಆಸ್ಪತ್ರೆಯೊಂದು ಬಾಗಿಲು ಮುಚ್ಚಿದೆ.
ವಿವಿಧ ವಿಭಾಗದಲ್ಲಿದ್ದ ವೈದ್ಯಕೀಯ ಉಪಕರಣಗಳು ಹಾಗೂ ಆಮ್ಲಜನಕ ಪೂರೈಸುವ ಪೈಪ್‌ಗಳು ತುಕ್ಕು ಹಿಡಿದು ಹಾಳಾಗುತ್ತಿವೆ.
ಇದು ನಗರದ ಯಶವಂತಪುರ ರೈಲು ನಿಲ್ದಾಣದ ಪಕ್ಕದಲ್ಲಿರುವ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆಯ ಸ್ಥಿತಿ.
ಕಟ್ಟಡ ಸುಸ್ಥಿತಿಯಲ್ಲಿದ್ದರೂ ಅದನ್ನು ನಿರ್ವಹಣೆ ಮಾಡುವ ವ್ಯವಸ್ಥೆಯೇ ಅನಾರೋಗ್ಯಕ್ಕೆ ತುತ್ತಾಗಿದೆ. ಬಿಬಿಎಂಪಿ ನಿರ್ಲಕ್ಷ್ಯದಿಂದ ಕಾರ್ಮಿಕ ಮಹಿಳೆಯರು ಹಾಗೂ ಬಡ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಾರೆ.
ಯಶವಂತಪುರದ ಸುತ್ತಮುತ್ತ ಮಧ್ಯಮ, ಕೂಲಿ ಕಾರ್ಮಿಕ ಹಾಗೂ ಬಡವವರ್ಗದ ಸಾಕಷ್ಟು ಕುಟುಂಬಗಳು ನೆಲೆಸಿವೆ. ಪಕ್ಕವೇ ಪೀಣ್ಯ ಕೈಗಾರಿಕೆ ಪ್ರದೇಶವೂ ಇದೆ. ಸಾಕಷ್ಟು ಹೋರಾಟದ ನಂತರ 1975ರಲ್ಲಿ ಯಶವಂತಪುರ ಕೇಂದ್ರ ಭಾಗದಲ್ಲೇ ಹೆರಿಗೆ ಆಸ್ಪತ್ರೆ ನಿರ್ಮಾಣಗೊಂಡಿತ್ತು. ಇನ್ನೆರಡು ವರ್ಷದಲ್ಲಿ ಆಸ್ಪತ್ರೆ ಸುವರ್ಣ ಸಂಭ್ರಮ ಆಚರಿಸಿಕೊಳ್ಳಬೇಕಿತ್ತು. ಆದರೆ, ಬಾಗಿಲು ಮುಚ್ಚಿದೆ. ಇಂದಲ್ಲ, ನಾಳೆ ಆಸ್ಪತ್ರೆ ಪುನರ್ ಆರಂಭಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ನಿವಾಸಿಗಳಿದ್ದಾರೆ.
ಮಾಹಿತಿಯಿಲ್ಲದೆ ಹೆರಿಗೆ ನೋವಿನಲ್ಲಿ ಆಸ್ಪತ್ರೆ ಬಳಿಗೆ ಬಂದ ಗರ್ಭಿಣಿಯರು ಬೇರೊಂದು ಆಸ್ಪತ್ರೆಗೆ ಅಲೆದಾಡುವ ಸ್ಥಿತಿಯಿದೆ. ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಆಸ್ಪತ್ರೆ ಗೇಟ್ ಎದುರು ಆಂಬುಲೆನ್ಸ್‌ವೊಂದು ನಿತ್ಯವೂ ನಿಂತಿರುತ್ತದೆ.
ಕಾರಣ ಏನು?
‘41 ವರ್ಷಗಳ ಕಾಲ ಉತ್ತಮ ಆರೋಗ್ಯ ಸೇವೆ ನೀಡಿದ್ದ ಆಸ್ಪತ್ರೆಯನ್ನು 2016ರಲ್ಲಿ ದುರಸ್ತಿ ಕಾರಣ ನೀಡಿ, ಬಂದ್ ಮಾಡಲಾಗಿತ್ತು. ವೈದ್ಯರು ಹಾಗೂ ಶುಶ್ರೂಷಕಿಯರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದವರನ್ನೂ ಬೇರೆಡೆಗೆ ದಾಖಲಿಸಲಾಗಿತ್ತು. 2020ರ ವೇಳೆಗೆ ಕಟ್ಟಡ ದುರಸ್ತಿ ಕಾರ್ಯ ಪೂರ್ಣಗೊಂಡಿತ್ತು. 2021ರಲ್ಲಿ ಇದನ್ನು ಕೋವಿಡ್ ತುರ್ತು ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲಾಯಿತು. ಕೋವಿಡ್ ಕಡಿಮೆಯಾದ ಮೇಲೆ ಹಿಂದಿನ ಮುಖ್ಯಮಂತ್ರಿ ಕಟ್ಟಡವನ್ನು ಉದ್ಘಾಟಿಸಿದ್ದರು. ಈಗ ಹಾಳು ಬಿದ್ದಿದೆ’ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಉಪಾಧ್ಯಕ್ಷೆ ಎಚ್.ಎಲ್.ನಿರ್ಮಲಾ ಹೇಳಿದರು.
ಯಶವಂತಪುರ, ಜಾಲಹಳ್ಳಿ, ದಾಸರಹಳ್ಳಿ, ಲಗ್ಗೆರೆ, ಸುಂಕದಕಟ್ಟೆ, ಪೀಣ್ಯ, ಮತ್ತಿಕೆರೆ, ಮುನೇಶ್ವರ ಕೊಳೆಗೇರಿ, ಮುತ್ಯಾಲನಗರದ ಕೂಲಿ ಕಾರ್ಮಿಕ ಮಹಿಳೆಯರು, ಕೆಳಮಧ್ಯಮ ವರ್ಗದ ಮಹಿಳೆಯರು ಈ ಆಸ್ಪತ್ರೆಗೆ ಬರುತ್ತಿದ್ದರು. ತಿಂಗಳಿಗೆ 250ರಿಂದ 300 ಹೆರಿಗೆಗಳು ಆಗುತ್ತಿದ್ದವು. ಈಗ ಅನಿವಾರ್ಯವಾಗಿ ಈ ಭಾಗದ ಗರ್ಭಿಣಿಯರು ಶ್ರೀರಾಮಪುರ ಹೆರಿಗೆ ಆಸ್ಪತ್ರೆ, ವಾಣಿ ವಿಲಾಸ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ ಎಂದು ಯಶವಂತಪುರ ನಿವಾಸಿ ಕೆ.ಹೇಮಾವತಿ ಅಳಲು ತೋಡಿಕೊಂಡರು.
ಸಣ್ಣಪುಟ್ಟ ಕಾಯಿಲೆಗೆ ಚಿಕಿತ್ಸೆ: ಜ್ವರ ಸೇರಿದಂತೆ ಮಕ್ಕಳ ಸಣ್ಣಪುಟ್ಟ ಕಾಯಿಲೆಗಳಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭಿಸುತ್ತಿತ್ತು. ಈಗ ಜ್ವರ ಬಂದರೂ ಮಕ್ಕಳು ಖಾಸಗಿ ಕ್ಲಿನಿಕ್‌ನಲ್ಲಿ ದುಬಾರಿ ಹಣ ಕೊಟ್ಟು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ನಜೀರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸದ್ಯದಲ್ಲೇ ಚಾಲನೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆಸ್ಪತ್ರೆಯನ್ನು ಹಸ್ತಾಂತರಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಹೀಗಾಗಿ ಪುನರ್ ಆರಂಭಿಸಿರಲಿಲ್ಲ. ಈಗ ಬಿಬಿಎಂಪಿಯಿಂದಲೇ ನಿರ್ವಹಣೆ ಮಾಡುತ್ತೇವೆ. ವೈದ್ಯಕೀಯ ಉಪಕರಣಗಳೂ ಇವೆ. ಸದ್ಯದಲ್ಲೇ ವೈದ್ಯರು ಹಾಗೂ ನರ್ಸ್ ನೇಮಕಕ್ಕೆ ಚಾಲನೆ ನೀಡಲಾಗುವುದು. ಕೆ.ವಿ. ತ್ರಿಲೋಕ್ ಚಂದ್ರ ವಿಶೇಷ ಆಯುಕ್ತ ಆರೋಗ್ಯ ವಿಭಾಗ ಬಿಬಿಎಂಪಿ
ನವೆಂಬರ್ ಗಡುವು
ಈ ಆಸ್ಪತ್ರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ನಾಲ್ಕು ದಿನಗಳ ಹಿಂದೆ ಡಿ.ಕೆ.ಸುರೇಶ್ ಅವರು ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಕರೆಸಿ ನವೆಂಬರ್ ಅಂತ್ಯಕ್ಕೆ ಆಸ್ಪತ್ರೆ ಬಾಗಿಲು ತೆರೆದು ಸೇವೆ ಕಲ್ಪಿಸಬೇಕು. ವೈದ್ಯರು ಶುಶ್ರೂಷಕಿಯರ ನೇಮಕ ಮಾಡಬೇಕು ಎಂದು ಸಂಸದರು ಬಿಬಿಎಂಪಿಗೆ ಸೂಚನೆ ನೀಡಿದ್ಧಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ನವೆಂಬರ್ ಅಂತ್ಯಕ್ಕೆ ಆಸ್ಪತ್ರೆ ಪುನರ್ ಆರಂಭಿಸಬೇಕು. ಸೇವೆಗೆ ಲಭ್ಯವಾಗದಿದ್ದರೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು. ಕೆ.ಹೇಮಾವತಿ ಯಶವಂತಪುರ ನಿವಾಸಿ ಸಮಸ್ಯೆ ಯಾರಿಗೆ ಹೇಳೋದು? ನಾನು ಹಾಗೂ ನನ್ನ ಇಬ್ಬರು ಮಕ್ಕಳು ಜನಿಸಿದ್ದು ಇದೇ ಆಸ್ಪತ್ರೆಯಲ್ಲಿ. ಬಿಬಿಎಂಪಿ ಸದಸ್ಯರೇ ಇಲ್ಲದಿರುವ ಕಾರಣಕ್ಕೆ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ.-ಯಶೋದಾ ತರಕಾರಿ ವ್ಯಾಪಾರಿ ಯಶವಂತಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.