ಬೆಂಗಳೂರು: ಯಶವಂತಪುರ ರೈಲು ನಿಲ್ದಾಣ ಇನ್ನು ಎರಡು ವರ್ಷಗಳಲ್ಲಿ ವಿಮಾನ ನಿಲ್ದಾಣದ ಮಾದರಿಯಲ್ಲಿ ಹೈಟೆಕ್ ಆಗಲಿದ್ದು, ಪುನರ್ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜೂನ್ 20ರಂದು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ್ದರು. ಈಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗೂ ಚಾಲನೆ ನೀಡಲಾಗಿದೆ. ಗಿರ್ಧಾರಿ ಲಾಲ್ ಕನ್‌ಸ್ಟ್ರಕ್ಷನ್ ಕಂಪನಿಯು ಯಶವಂತಪುರ ನಿಲ್ದಾಣದ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದೆ. ಯೋಜನೆಯನ್ನು ವಿನ್ಯಾಸಗೊಳಿಸಿ, ಕಾಮಗಾರಿ ನಿರ್ವಹಿಸಿ ಹಸ್ತಾಂತರಿಸುವ ಜವಾಬ್ದಾರಿಯನ್ನು ಈ ಕಂಪನಿಗೆ ವಹಿಸಲಾಗಿದೆ.
₹380 ಕೋಟಿ ಮೊತ್ತದ ಯೋಜನೆ ಇದಾಗಿದೆ. ಪ್ರಯಾಣಿಕರ ದಟ್ಟಣೆ ತಗ್ಗಿಸಲು ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳನ್ನು ನಿರ್ಮಿಸಲಾಗುತ್ತದೆ. 216 ಮೀಟರ್ ಅಗಲದ ಏರ್ ಕನ್‌ಕೋರ್ಸ್ ಇರಲಿದೆ. ಪ್ಲಾಟ್‌ಫಾರಂ ಮೇಲ್ಚಾವಣಿಯ ಮೇಲಿನ ಪ್ಲಾಜಾದಲ್ಲಿ ಚಿಲ್ಲರೆ ಅಂಗಡಿಗಳು, ಹೋಟೆಲ್‌ಗಳು, ಮನರಂಜನಾ ಕೇಂದ್ರಗಳು ಬರಲಿವೆ. ಪ್ರಯಾಣಿಕರ ಮಾರ್ಗದರ್ಶನಕ್ಕೆ ಎಲ್‌ಇಡಿ ಫಲಕಗಳನ್ನು ಅಳವಡಿಸುವುದು ಯೋಜನೆಯಲ್ಲಿ ಒಳಗೊಂಡಿದೆ.
ಮೆಟ್ರೊ ನಿಲ್ದಾಣದ ಕಡೆಗೆ(ಪಶ್ಚಿಮ ಭಾಗ) ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ. ಯಶವಂತಪುರ ಮಾರುಕಟ್ಟೆ ಭಾಗದಲ್ಲಿ(ಪ್ಲಾಟ್‌ಫಾರಂ–1 ಕಡೆಗೆ) ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಾಣವಾಗಲಿದೆ. ಪಾಟ್‌ಫಾರಂ –1 ಮೇಲ್ಭಾಗದಲ್ಲಿ ವಿಮಾನ ನಿಲ್ದಾಣದಲ್ಲಿ ಇರುವಂತೆ ಏರ್ ಕನ್‌ಕೋರ್ಸ್ ನಿರ್ಮಾಣವಾಗಲಿದೆ. ಈ ಕಟ್ಟಡಕ್ಕೆ ಸೂರ್ಯನ ಬೆಳಕು ನೇರವಾಗಿ ತಲುಪುವಂತೆ ವಿನ್ಯಾಸ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.
ಪ್ರಯಾಣಿಕರನ್ನು ವಾಹನಗಳಿಂದ ಇಳಿಸುವ ಮತ್ತು ಕರೆದೊಯ್ಯುವ ತಾಣಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುವುದು. ಪುನರ್ ಅಭಿವೃದ್ಧಿಗೊಂಡ ಬಳಿಕ ಈ ನಿಲ್ದಾಣವು ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಆಕರ್ಷಿಸುವ ಕೇಂದ್ರವಾಗಲಿದೆ. ರೈಲು ಪ್ರಯಾಣಿಕರಿಗೆ ವಿಶೇಷ ಅನುಭವವನ್ನು ಈ ನಿಲ್ದಾಣ ನೀಡಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಎಸ್ಕಲೇಟರ್‌ಗಳು, ಲಿಫ್ಟ್‌ಗಳು ಮತ್ತು ಹೈಟೆಕ್ ಶೌಚಾಲಯಗಳು ನಿರ್ಮಾಣವಾಗಲಿವೆ. ಇಂಧನ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಲಾಗಿದ್ದು, ಪರಿಸರಸ್ನೇಹಿ ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ. ಘನತ್ಯಾಜ್ಯವನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಲು ಪ್ರತ್ಯೇಕ ಘಟಕ, ಮಳೆ ನೀರು ಸಂಗ್ರಹಕ್ಕೂ ಯೋಜನೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಬಳಿಕ ಈ ನಿಲ್ದಾಣವು ದಿನಕ್ಕೆ 1 ಲಕ್ಷ ಪ್ರಯಾಣಿಕರು ಸಂಚರಿಸುವ ಸಾಮರ್ಥ್ಯ ಹೊಂದಲಿದೆ. ಸದ್ಯ ಈ ನಿಲ್ದಾಣಕ್ಕೆ ನಿತ್ಯ 60 ಸಾವಿರ ಪ್ರಯಾಣಿಕರು ಬಂದು ಹೋಗುತ್ತಿದ್ದಾರೆ. ಈ ಯೋಜನೆ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಬೇಕಾಗಲಿದೆ. 2025ರ ಜೂನ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಗಡುವನ್ನು ಗುತ್ತಿಗೆದಾರರಿಗೆ ರೈಲ್ವೆ ಇಲಾಖೆ ನೀಡಿದೆ.
ಯಶವಂತಪುರ ರೈಲು ನಿಲ್ದಾಣದ ಹೊರ ಭಾಗವನ್ನು ಇತ್ತೀಚೆಗೆ (ಕೋವಿಡ್ ಪೂರ್ವದಲ್ಲಿ) ಮರು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಈ ವಿನ್ಯಾಸದಲ್ಲಿ ಅಗತ್ಯ ಇರುವುದನ್ನು ಹೊಸ ಕಾಮಗಾರಿಯಲ್ಲಿ ಉಳಿಸಿಕೊಳ್ಳಲಾಗುತ್ತದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.