ADVERTISEMENT

ಇದೇ ಟ್ರೆಂಡ್‌, ಇದಕ್ಕೇ ಫುಲ್‌ ಡಿಮ್ಯಾಂಡ್‌!

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:31 IST
Last Updated 20 ಜೂನ್ 2019, 19:31 IST
ಸ್ವಾತಿ
ಸ್ವಾತಿ   

‘ಈಗ ಪವರ್‌ ಯೋಗವೇ ಟ್ರೆಂಡ್‌. ಇದುಕಾರ್ಡಿಯೊ ಹಾಗೂ ಆಸನಗಳ ಮಿಶ್ರಣ. ಇಲ್ಲಿ ಆಸನಗಳ ಜೊತೆ ಜಂಪ್‌, ಪುಶಪ್ಸ್‌ಗಳನ್ನು ಹೇಳಿಕೊಡಲಾಗುತ್ತದೆ. ಯುವಜನರೂ ಈ ಯೋಗಗಳನ್ನೇ ಹೆಚ್ಚು ಮಾಡುತ್ತಾರೆ’

ವೃತ್ತಿಪರ ಯೋಗ ತರಬೇತುಗಾರ್ತಿ ಸ್ವಾತಿ ಅವರ ಅನುಭವವಿದು. ನಗರದಲ್ಲಿ ಯೋಗ ಕೋರ್ಸ್‌ಗಳ ಬಗ್ಗೆ ‘ಮೆಟ್ರೊ’ ಜೊತೆ ಮಾತಿಗೆ ಸಿಕ್ಕ ಸ್ವಾತಿ ಯೋಗದ ಹಲವು ಆಯಾಮಗಳನ್ನು ಪರಿಚಿಸಿದರು. ಅವರೊಂದಿಗೆ ನಡೆಸಿದ ಮಾತುಕತೆಯ ಆಯ್ದ ಭಾಗವಿದು.

ತರಬೇತಿಗೆ ಯಾರೆಲ್ಲ ಬರ್ತಾರೆ?

ADVERTISEMENT

ಒತ್ತಡ ನಿವಾರಣೆ, ಏಕಾಗ್ರತೆ, ತೂಕ ಇಳಿಕೆಗಾಗಿ ಈಗ ಅನೇಕರು ಯೋಗ ಕಲಿಯುತ್ತಿದ್ದಾರೆ. ಜಿಮ್‌ಗೆ ಹೋಗಲು ಸಾಧ್ಯವಿಲ್ಲದವರು ಯೋಗ ತರಗತಿಗಳನ್ನು ಹುಡುಕಿಕೊಂಡು ಬರುತ್ತಾರೆ. ಇದನ್ನು ಕಡಿಮೆ ಸಮಯದಲ್ಲಿ ಮಾಡಬಹುದು ಎಂಬುದು ಇದಕ್ಕೆ ಕಾರಣ.ಯೋಗ ಕಲಿಯಲು ಬರುವವರಲ್ಲಿ ಮಧ್ಯಮ ವಯಸ್ಸಿನವರು, ಆರವತ್ತರ ನಂತರದ ವಯಸ್ಸಿನವರೇ ಜಾಸ್ತಿ. ಆದರೆಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಯೋಗ ಕಲಿಸಿದರೆ ಹೆಚ್ಚು ಪ್ರಯೋಜನ. ಶರೀರ ಸಲೀಸಾಗಿ ಬಾಗುವುದರಿಂದಕಲಿತುಕೊಳ್ಳಲು ಸುಲಭ.

ನೀವು ಈ ಯೋಗ ಜಗತ್ತಿಗೆ ಬಂದಿದ್ದು ಹೇಗೆ?

7 ವರ್ಷಗಳಿಂದ ನಾನು ಯೋಗ ಅಭ್ಯಾಸ ಮಾಡುತ್ತಿದ್ದೇನೆ. ಮೊದಲು ನಾನು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕುಳಿತು ಕೆಲಸ ಮಾಡಿ ತೂಕ ಹೆಚ್ಚಾಯಿತು. ನಂತರ ಯೋಗ ತರಗತಿಗೆ ಸೇರಿಕೊಂಡೆ. ತೂಕ ಇಳಿಯುವುದರ ಜೊತೆಗೆ ಯೋಗವುನನ್ನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಟ್ಟಿ ಮಾಡಿದೆ.

(ಸ್ವಾತಿ ಸಹ ಒತ್ತಡ ನಿವಾರಣೆ ಹಾಗೂ ತೂಕ ಇಳಿಸಿಕೊಳ್ಳುವ ಸಲುವಾಗಿ ಯೋಗ ಕಲಿತವರು. ಈಗ ಬಸವೇಶ್ವರ ನಗರ ಹಾಗೂ ಜೆ.ಪಿನಗರದಲ್ಲಿ ಸ್ವಂತ ಯೋಗ ತರಗತಿ ಕೇಂದ್ರಗಳನ್ನು ನಡೆಸುತ್ತಿದ್ದಾರೆ) ನೀವು ವೇಟ್‌ ಲಿಫ್ಟರ್‌ ಕೂಡ. ಅದಕ್ಕೂ ಯೋಗ ಸಹಾಯ ಮಾಡಿದೆಯಂತೆ ಹೌದಾ!

2017ರಲ್ಲಿ ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಹೆಲ್ತ್‌ ಫಿಟ್‌ನೆಸ್‌ ಫೆಸ್ಟಿವಲ್‌ನಲ್ಲಿ 100 ಕೆ.ಜಿ ಹಾಗೂ 125 ಕೆ.ಜಿ ಭಾರ ಎತ್ತುವ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ಯೋಗಾಸನದಿಂದ ಬೆನ್ನಿಗೆ ಹೆಚ್ಚು ಶಕ್ತಿ ದೊರೆಯುತ್ತದೆ.

ಬೆಂಗಳೂರಿಗರಿಗೆ ಏನು ಹೇಳಲು ಬಯಸುತ್ತೀರಿ?

ಈಗ ಬೆಂಗಳೂರಿನಲ್ಲಿ ತೂಕ ಇಳಿಕೆ, ಆರೋಗ್ಯ ಸಮಸ್ಯೆಗಳಿಗಾಗಿ ಯೋಗ ಕಲಿಯುವವರು ಹೆಚ್ಚು. ಥೈರಾಯ್ಡ್‌, ಪಿಸಿಒಡಿ, ಬೆನ್ನು ನೋವು ಇರುವವರು ಬರುತ್ತಾರೆ. ಯೋಗದಿಂದ ಆರೋಗ್ಯ ವೃದ್ಧಿ ಜೊತೆಗೆಫಿಟ್‌ನೆಸ್‌ ಕೂಡ ಕಾಪಾಡಿಕೊಳ್ಳಬಹುದು. ಯೋಗ ಸೌಂದರ್ಯವರ್ಧಕವೂ ಹೌದು. ಶೀರ್ಷಾಸನ ಮಾಡುವುದರಿಂದ ಮುಖಕ್ಕೆ ರಕ್ತದ ಹರಿವು ಹೆಚ್ಚುತ್ತದೆ. ಮುಖದ ಹೊಳಪು ಜಾಸ್ತಿಯಾಗಿ ಮೊಡವೆ ಕಡಿಮೆಯಾಗುತ್ತದೆ. ಎಣ್ಣೆ ತ್ವಚೆ ಕಡಿಮೆಯಾಗುತ್ತದೆ.ಈಗ ಮ್ಯೂಸಿಕ್‌ ಯೋಗ, ನೃತ್ಯ ಯೋಗ ಹೀಗೆ ನಾನಾ ಬಗೆಯ ಯೋಗಗಳು ನಗರದಲ್ಲಿವೆ.ಮಧುಮೇಹದವರಿಗೆ ಡಯಬಿಟಿಕ್‌ ಯೋಗ ಇದೆ. ಅದರಲ್ಲಿ ವಜ್ರಾಸನ, ಸುಖಾಸನಗಳನ್ನು ಹೇಳಿಕೊಡಲಾಗುತ್ತದೆ. ಉತ್ತಮ ಫಲಿತಾಂಶಕ್ಕೆ ಡಯೆಟ್‌ ಕೂಡ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.