ಬೆಂಗಳೂರು: ಬಸವೇಶ್ವರನಗರದ ಮನೆಯೊಂದರಲ್ಲಿ ಸ್ನಾನಕ್ಕೆ ಹೋಗಿದ್ದ ರಾಜೇಶ್ವರಿ (23) ಅವರು ಉಸಿರುಗಟ್ಟಿ ಮೃತಪಟ್ಟಿದ್ದು, ಗ್ಯಾಸ್ ಗೀಸರ್ ಸೋರಿಕೆಯಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
‘ಡಿ. 20ರಂದು ನಡೆದಿರುವ ಘಟನೆ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜೇಶ್ವರಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿ ಮುಗಿಸಿರುವ ವೈದ್ಯರು ಸದ್ಯದಲ್ಲೇ ವರದಿ ನೀಡಲಿದ್ದಾರೆ. ಈ ಸಾವು ಯಾವ ಕಾರಣಕ್ಕೆ ಆಯಿತು? ಎಂಬುದು ವರದಿಯಿಂದ ಗೊತ್ತಾಗಬೇಕಿದೆ’ ಎಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಮೂಲಗಳು ಹೇಳಿವೆ.
‘ಬಸವೇಶ್ವರನಗರದ ಕೃಷ್ಣ ಕಲ್ಯಾಣ ಮಂಟಪ ಬಳಿ ಮನೆಯಲ್ಲಿ ಪೋಷಕರ ಜೊತೆ ರಾಜೇಶ್ವರಿ ನೆಲೆಸಿದ್ದರು. ಡಿ. 20ರಂದು ಮಧ್ಯಾಹ್ನ ಸ್ನಾನಕ್ಕೆ ಹೋಗಿದ್ದರು. ಸ್ನಾನದ ಕೊಠಡಿಯಲ್ಲಿ ಗ್ಯಾಸ್ ಗೀಸರ್ ಸಂಪರ್ಕವಿತ್ತು. ಕೆಲ ನಿಮಿಷಗಳ ನಂತರ ರಾಜೇಶ್ವರಿ, ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದರು. ಕುಟುಂಬಸ್ಥರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ರಾಜೇಶ್ವರಿ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಗ್ಯಾಸ್ ಗೀಸರ್ ಸೋರಿಕೆಯಾಗಿದ್ದರಿಂದ ಉಸಿರಾಡಲು ಸಾಧ್ಯವಾಗದೇ ರಾಜೇಶ್ವರಿ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿರುವ ಅನುಮಾನವಿದೆ. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಪುರಾವೆಗಳು ಸಿಕ್ಕಿಲ್ಲ. ವೈದ್ಯರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಾವಿಗೆ ಬೇರೆ ಕಾರಣಗಳೂ ಇರಬಹುದು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.