ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ ₹31 ಸಾವಿರ ಮೌಲ್ಯದ ಬಟ್ಟೆ ಖರೀದಿಸಿ, ನಂತರ ಆನ್‌ಲೈನ್ ಮೂಲಕ ಹಣ ಪಾವತಿಯಾಗಿದೆ ಎಂದು ನಕಲಿ ಫೋಟೊ ತೋರಿಸಿ ವಂಚಿಸಿದ್ದ ಯುವತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರದ ರಶ್ಮಿ(25) ಬಂಧಿತೆ.
ಆರೋಪಿಯು ಸದಾಶಿವನಗರದ ಆರ್‌ಎಂವಿ ಬಡಾವಣೆಯ ವಸಿಷ್ಠ ಬುಟಿಕ್ ಎಂಬ ಬಟ್ಟೆ ಅಂಗಡಿಗೆ ಬಂದು ₹31,800 ಮೌಲ್ಯದ ಬಟ್ಟೆ ಖರೀದಿಸಿ, ವಂಚಿಸಿದ್ದರು. ಅಂಗಡಿಯವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ವಿಮಾ ಕಂಪನಿಯೊಂದರಲ್ಲಿ ರಶ್ಮಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಲೆಕ್ಕ ಪರಿಶೋಧಕ (ಸಿ.ಎ) ಪರೀಕ್ಷೆ ತೆಗೆದುಕೊಂಡಿದ್ದರು. ಅ.29ರಂದು ಮಧ್ಯಾಹ್ನ 1ರ ಸುಮಾರಿಗೆ ಬಟ್ಟೆ ಅಂಗಡಿಗೆ ಬಂದಿದ್ದ ಆಕೆ, ವಿನ್ಯಾಸಕಿ ಸಂಪದ ಅವರಿಂದ ಬಟ್ಟೆ ಖರೀದಿಸಿದ್ದರು. ಸ್ನೇಹಾ ಹೆಸರಿನಲ್ಲಿ ಬಿಲ್ ಮಾಡಿಸಿದ್ದರು. ನಂತರ, ಸ್ಕ್ಯಾನರ್ ಮೂಲಕ ಹಣ ಪಾವತಿ ಮಾಡಿರುವುದಾಗಿ ಮೊಬೈಲ್‌ನ ಸ್ಕ್ರೀನ್‌ಶಾಟ್ ತೋರಿಸಿದ್ದರು. ಆದರೆ, ಅಂಗಡಿಯ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿರಲಿಲ್ಲ’ ಎಂದು ಪೊಲೀಸರು ಹೇಳಿದರು.
‘ಸಂಜೆಯಾದರೂ ಬ್ಯಾಂಕ್ ಖಾತೆಗೆ ಹಣ ಸಂದಾಯ ಆಗಿರಲಿಲ್ಲ. ಬಳಿಕ ರಶ್ಮಿ ನೀಡಿದ್ದ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದರು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮತ್ತೊಮ್ಮೆ ಕರೆ ಮಾಡಿದಾಗ ಪುರುಷರೊಬ್ಬರು ಸ್ವೀಕರಿಸಿದ್ದರು. ರಶ್ಮಿ ಅವರ ಹೆಸರಿನವರು ಯಾರೂ ಇಲ್ಲ ಎಂಬುದಾಗಿ ಹೇಳಿದ್ದರು. ಅದಾದ ಮೇಲೆ ವಂಚನೆ ಆಗಿರುವುದು ಗೊತ್ತಾಗಿ ದೂರು ನೀಡಿದ್ದರು‘ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.