ಬೆಂಗಳೂರು: ಆನ್‌ಲೈನ್ ಗೇಮ್‌ನಲ್ಲಿ ಕಳೆದುಕೊಂಡಿದ್ದ ಹಣವನ್ನು ಸರಿದೂಗಿಸಿಕೊಳ್ಳಲು ಮನೆ ಕಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಗುಜರಾತ್‌ನ ಭಾವೇಶ್ (30) ಬಂಧಿತ ಆರೋಪಿ. ಈತನಿಂದ ₹22 ಲಕ್ಷ ಮೌಲ್ಯದ 322 ಗ್ರಾಂ. ಚಿನ್ನಾಭರಣ ಹಾಗೂ 71 ಗ್ರಾಂ. ನಕಲಿ ಆಭರಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಭಾವೇಶ್ ಕೆಲ ವರ್ಷಗಳ ಹಿಂದೆ ಕುಟುಂಬಸ್ಥರ ಜೊತೆಗೆ ನಗರಕ್ಕೆ ಬಂದು ನೆಲಸಿದ್ದು, ಸಹೋದರನ ಪ್ಲೈವುಡ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಆನ್‌ಲೈನ್ ಗೇಮ್‌ನಲ್ಲಿ ಕಳೆದುಕೊಂಡಿದ್ದ ಹಣ ಸರಿದೂಗಿಸಲು ಕಳವು ಮಾಡುತ್ತಿದ್ದ. ಕಸವನಹಳ್ಳಿಯ ಅಪಾರ್ಟ್‌ಮೆಂಟ್‌ನ ನಿವಾಸಿ ದೇವಸ್ಥಾನಕ್ಕೆ ತೆರಳಿದ್ದಾಗ 320 ಗ್ರಾಂ. ಚಿನ್ನಾಭರಣ ಕಳವು ಮಾಡಿದ್ದ’ ಎಂದು ಪೊಲೀಸರು ಹೇಳಿದರು.
‘ಕದ್ದಿದ್ದ ಚಿನ್ನವನ್ನು ಗ್ರೀನ್‌ಗ್ಲೇನ್ ಲೇಔಟ್‌ನ ಅಪಾರ್ಟ್‌ಮೆಂಟ್ ಬಳಿಯ ಖಾಲಿ ಪ್ರದೇಶದ ಪೊದೆಯಲ್ಲಿ ಬಚ್ಚಿಟ್ಟಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದ. ಆನ್‌ಲೈನ್ ಗೇಮ್‌ನಲ್ಲಿ ಆರೋಪಿ ಸುಮಾರು ₹40 ಲಕ್ಷ ಕಳೆದುಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.