ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವ ಜನಾಂಗ ಪಾಲ್ಗೊಂಡು ಧನಾತ್ಮಕ ಬದಲಾವಣೆಗೆ ಕಾರಣವಾಗಬೇಕು’ ಎಂದು ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷ ರಾಜೀವ್ ಗೌಡ ಹೇಳಿದರು.
ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಬಿ.ಪ್ಯಾಕ್ ಆಯೋಜಿಸಿದ್ದ ‘ಉತ್ತಮ ಬೆಂಗಳೂರು ನಿರ್ಮಾಣದಲ್ಲಿ ಯುವಜನತೆಯ ಪಾತ್ರ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಯುವ ಸಮುದಾಯದ ಪಾತ್ರ ಅಮೂಲ್ಯವಾದದು. ವಿಶ್ವದಲ್ಲೇ ಭಾರತ ಅತಿ ಹೆಚ್ಚು ಯುವ ಸಮುದಾಯವನ್ನು ಹೊಂದಿದ್ದು, ಅವರಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ’ ಎಂದರು.
‘ಸಮಾಜಸೇವೆ, ರಾಜಕೀಯ ಜ್ಞಾನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ನೆರೆಹೊರೆಯವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದರಿಂದ ಸಮಸಮಾಜ ನಿರ್ಮಾಣ ಹಾಗೂ ಉತ್ತಮ ನಾಗರಿಕರಾಗಲು ಸಾಧ್ಯ.
ಸ್ವಾಮಿ ವಿವೇಕಾನಂದರ ಆಶಯಗಳಂತೆ ಜೀವಿಸಬೇಕು. ಸಮುದಾಯ ಕೇಂದ್ರಿತ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು’ ಎಂದು ಹೇಳಿದರು.
ಸೇಂಟ್ ಆನ್ಸ್ ಸಂಸ್ಥೆ ಪ್ರಾಂಶುಪಾಲರಾದ ಸಿಸ್ಟರ್ ಅನೀಸಿಯಾ, ಎನ್‌ಎಸ್‌ಎಸ್ ಪ್ರೋಗ್ರಾಂ ಆಫೀಸರ್ ಪಾರ್ವತಿ, ಬಿ.ಕ್ಲಿಪ್ ಕಾರ್ಯಕ್ರಮ ಮುಖ್ಯಸ್ಥ ಎಚ್.ಎಸ್. ರಾಘವೇಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.