ಬೆಂಗಳೂರು: ‘ನನ್ನ ಚಪ್ಪಲಿ ಕಳ್ಳತನವಾಗಿದ್ದು, ಹುಡುಕಿಕೊಡಿ’ ಎಂದು ಯುವಕನೊಬ್ಬ ‘ನಮ್ಮ 112’ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದ್ದು, ಸ್ಥಳಕ್ಕೆ ಹೋದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಯುವಕನಿಗೆ ಬುದ್ದಿ ಹೇಳಿ ಬಿಟ್ಟು ಕಳುಹಿಸಿದ್ದಾರೆ.
ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯ ಕಾರ್ ಸ್ಟ್ರೀಟ್‌ನಲ್ಲಿರುವ ಸಭಾಭವನವೊಂದಕ್ಕೆ ಭಾನುವಾರ ರಾತ್ರಿ ಬಂದಿದ್ದ ಯುವಕ, ಹೊರಗಡೆ ಚಪ್ಪಲಿ ಬಿಟ್ಟು ಒಳಗೆ ಹೋಗಿದ್ದ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕೆಲ ನಿಮಿಷಗಳ ನಂತರ ಹೊರಗೆ ಬಂದಿದ್ದ. ಆದರೆ, ಸ್ಥಳದಲ್ಲಿ ಚಪ್ಪಲಿಗಳು ಇರಲಿಲ್ಲ. ಚಪ್ಪಲಿಗಾಗಿ ಹಲವೆಡೆ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಯುವಕ, ‘ಸಭಾಭವನದಲ್ಲಿ ಚಪ್ಪಲಿಗಳು ಕಳ್ಳತನವಾಗುತ್ತಿವೆ. ನನ್ನ ಚಪ್ಪಲಿ ಸಹ ಇಂದು ಕಳ್ಳತನವಾಗಿದೆ. ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿ, ಚಪ್ಪಲಿ ಹುಡುಕಿಕೊಡಿ’ ಎಂದು ದೂರಿದ್ದ. ಗಸ್ತಿನಲ್ಲಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಸ್ಥಳಕ್ಕೆ ಹೋಗಿದ್ದರು.
ಯುವಕನಿಂದ ಮಾಹಿತಿ ಪಡೆದಿದ್ದ ಸಿಬ್ಬಂದಿ, ಚಪ್ಪಲಿಗಾಗಿ ಕೆಲ ನಿಮಿಷ ಹುಡುಕಾಟ ನಡೆಸಿದ್ದರು. ಆದರೆ, ಚಪ್ಪಲಿ ಸಿಕ್ಕಿರಲಿಲ್ಲ. ಯುವಕನನ್ನು ತರಾಟೆಗೆ ತೆಗೆದುಕೊಂಡ ಸಿಬ್ಬಂದಿ, ‘ಚಪ್ಪಲಿ ಕಳುವಾಗಿದ್ದರೆ, ಠಾಣೆಗೆ ಬಂದು ದೂರು ನೀಡು’ ಎಂದು ಬುದ್ದಿವಾದ ಹೇಳಿ ಬಿಟ್ಟು ಕಳುಹಿಸಿದ್ದಾರೆ. ಯುವಕ ಯಾರು ಹಾಗೂ ವಿಳಾಸವೇನು ಎಂಬುದು ಗೊತ್ತಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.