ADVERTISEMENT

ಬೆಂಗಳೂರು | ಎರಡು ಗುಂಪುಗಳ ಮಧ್ಯೆ ಜಗಳ: ದುರುಗುಟ್ಟಿ ನೋಡಿದ್ದಕ್ಕೆ ಯುವಕನ ಕೊಲೆ

ಯುವಕರಿಬ್ಬರಿಗೆ ಚೂರಿ ಇರಿತ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:40 IST
Last Updated 21 ಜುಲೈ 2024, 15:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಒಬ್ಬನನ್ನು ಮತ್ತೊಬ್ಬ ದುರುಗುಟ್ಟಿ ನೋಡಿದ ಎಂಬ ಕಾರಣಕ್ಕೆ ನಡೆದ ಜಗಳದಲ್ಲಿ ಅಪರಿಚಿತ ಗುಂಪೊಂದು ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದೆ.

ಹೊಯ್ಸಳ ನಗರದ ನಿವಾಸಿ, ಖಾಸಗಿ ಸಂಸ್ಥೆಯ ಉದ್ಯೋಗಿ ಮನೋಜ್ (22) ಮೃತ ಯುವಕ. ಘಟನೆಯಲ್ಲಿ ಗಾಯಗೊಂಡಿರುವ ಅಂಥೋನಿ (23) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ ಬೆಳಿಗ್ಗೆ ಮನೋಜ್ ತನ್ನ ಸ್ನೇಹಿತ ಅಂಥೋಣಿ ಜತೆ ಮನೆಗೆ ಹಿಂದಿರುಗುವ ವೇಳೆ ರಾಮಮೂರ್ತಿ ನಗರದ ರಸ್ತೆಯಲ್ಲಿ ಜನರ ಗುಂಪು ಗಲಾಟೆ ಮಾಡುತ್ತಿರುವುದನ್ನು ನೋಡಿದರು. ಆಗ ಮನೋಜ್‌ ಏನು ನಡೆಯುತ್ತಿದೆ ಎಂಬುದನ್ನು ಕುತೂಹಲದಿಂದ ನೋಡುತ್ತ ನಿಂತರು.

ADVERTISEMENT

ಗಲಾಟೆ ನಡೆಯುತ್ತಿದ್ದ ಸ್ಥಳದಲ್ಲಿ ಮನೋಜ್ ತಮ್ಮನ್ನು ದುರುಗುಟ್ಟಿ ನೋಡಿದರು ಎಂದು ತಕರಾರು ತೆಗೆದ ಅಪರಿಚಿತರ ಗುಂಪು ಅವರೊಂದಿಗೆ ಜಗಳಕ್ಕೆ ಇಳಿಯಿತು. ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಎದುರಾಳಿ ಗುಂಪಿನವರು ಮನೋಜ್ ಮತ್ತು ಅಂಥೋನಿಗೆ ಚೂರಿಯಿಂದ ಇರಿದಿದ್ದಾರೆ. ಮನೋಜ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಅಂಥೋನಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಮೇಲೆ ಕಲ್ಲು ತೂರಾಟ: ತಮಿಳುನಾಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ 24 ವರ್ಷದ ಮಹಾರಾಜ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಮಹಾರಾಜ ಅವರು ಕಲಾಸಿಪಾಳ್ಯದಲ್ಲಿರುವ ತನ್ನ ಕೆಲಸದ ಸ್ಥಳಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ನಗರದ ಪುರಭವನದ ಬಳಿ ಮಧ್ಯರಾತ್ರಿ ಮಹಾರಾಜ ಅವರು ಇಳಿಯುತ್ತಿದ್ದಂತೆ ಬಸ್ ಚಲಿಸಿತು. ನಿಯಂತ್ರಣ ತಪ್ಪಿ ಅವರು ಕೆಳಗೆ ಬಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಇದರಿಂದ ಕೋಪಗೊಂಡ ಅವರು ಬಸ್ ಮೇಲೆ ಕಲ್ಲು ತೂರಾಟ ಮಾಡಿ, ‌ಗಾಜಿಗೆ ಹಾನಿ ಮಾಡಿದರು.

ನಂತರ ಬಸ್‌ ನಿರ್ವಾಹಕ ಮತ್ತು ಇತರ ಪ್ರಯಾಣಿಕರು ಅವರನ್ನು ಹಿಡಿದು ಎಸ್. ಜೆ ಪಾರ್ಕ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.