ಬೆಂಗಳೂರು: ವಿಡಿಯೊ ಸುದ್ದಿ ಬಿತ್ತರಿಸಿ ಅಂಗಡಿ ಮುಚ್ಚಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪದಡಿ ‘ಎಕೆ ನ್ಯೂಸ್ ಕನ್ನಡ’ ಯೂಟ್ಯೂಬ್ ಚಾನೆಲ್‌ನ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್. ಪುರ ನಿವಾಸಿ ಸಾದಿಕ್ ಖಾನ್ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಚಾನೆಲ್‌ನ ಆತ್ಮಾನಂದ್ ಹಾಗೂ ಆನಂದ್ ಅಲಿಯಾಸ್ ಫಿಗರ್‌ನನ್ನು ಬಂಧಿಸಿದ್ದರು. ಇದೀಗ, ಚಾನೆಲ್‌ನ ಶ್ರೀನಿವಾಸ್ ಅಲಿಯಾಸ್ ರೇಷ್ಮೆನಾಡು ಹಾಗೂ ಕೇಶವಮೂರ್ತಿ ಅವರನ್ನು ಸೆರೆ ಹಿಡಿದಿದ್ದಾರೆ.
‘ಸುದ್ದಿ ವಾಹಿನಿ ಪ್ರತಿನಿಧಿಗಳು ಎಂದು ಹೇಳಿಕೊಂಡು ಸುತ್ತಾಡುತ್ತಿದ್ದ ಆರೋಪಿಗಳು, ಮಾಂಸ ಮಾರಾಟ ವ್ಯಾಪಾರಿ ಸಾದಿಕ್ ಅವರನ್ನು ಬೆದರಿಸಿ ₹ 3 ಲಕ್ಷ ಸುಲಿಗೆ ಮಾಡಿದ್ದರು. ದೂರು ದಾಖಲಾಗುತ್ತಿದ್ದಂತೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾರು, ಮೊಬೈಲ್ ಹಾಗೂ ₹ 13 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.
‘ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಸ್ಥಳಗಳಿಗೆ ಹೋಗುತ್ತಿದ್ದ ಆರೋಪಿಗಳು, ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಪೊಲೀಸರಿಂದ ಗೋದಾಮು ಹಾಗೂ ಮಳಿಗೆ ಮೇಲೆ ದಾಳಿ ಮಾಡಿಸುವುದಾಗಿ ವ್ಯಾಪಾರಿಗಳನ್ನು ಬೆದರಿಸುತ್ತಿದ್ದರು. ನಂತರ, ಹಣ ಸುಲಿಗೆ ಮಾಡುತ್ತಿದ್ದರು. ಪ್ರತಿ ತಿಂಗಳು ₹ 20 ಸಾವಿರದಿಂದ ₹ 25 ಸಾವಿರ ನೀಡುವಂತೆಯೂ ಒತ್ತಾಯಿಸುತ್ತಿದ್ದರು. ಕಿರುಕುಳದಿಂದ ಬೇಸತ್ತ ಸಾದಿಕ್ ಖಾನ್, ಠಾಣೆಗೆ ಮೆಟ್ಟಿಲೇರಿದ್ದರು’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.