ನೆಲಮಂಗಲ: ‘ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳುವ ಮೊದಲು, ಸಚಿವ ಜಮೀರ್ ಅಹಮದ್ ಖಾನ್ ಅವರು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವಲ್ಲದೇ ಬೇರೆಡೆ ಸ್ಪರ್ಧಿಸಿ ಗೆದ್ದು ತೋರಿಸಲಿ, ನಾನು ಅವರ ವಿರುದ್ಧ ಸ್ಪರ್ಧಿಸಿ ಗೆಲ್ಲುತ್ತೇನೆ’ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌಧರಿ ಬಹಿರಂಗ ಸವಾಲು ಹಾಕಿದರು.
ಚನ್ನಪಟ್ಟಣದ ಉಪಚುನಾವಣೆ ವೇಳೆ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹಮದ್ ಅವರು ಅವಹೇಳನಕಾರಿ ಮಾತುಗಳನ್ನಾಡಿರುವುದನ್ನು ಖಂಡಿಸಿ ಒಕ್ಕಲಿಗ ಸಮುದಾಯದ ಸಂಘಟನೆಗಳು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
’ನಾವು ಬೆಳೆದುಬಂದ ದಾರಿಯನ್ನು ಮರೆಯಬಾರದು, ಅವರ ಹೇಳಿಕೆಯಿಂದ ಒಕ್ಕಲಿಗ ಸಮುದಾಯಕ್ಕೆ ನೋವುಂಟಾಗಿದೆ’ ಎಂದರು.
ಮಾಜಿ ಶಾಸಕ ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ‘ಜಮೀರ್ ಅವರು ಅಧಿಕಾರದ ಮದದಿಂದ ಈಗಾಗಲೆ ವಕ್ಫ್ ವಿವಾದ ಸೃಷ್ಟಿಸಿದ್ದಾರೆ. ಕೂಡಲೆ ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಶಾಸಕ ಸ್ಥಾನದಿಂದ ರಾಜಿನಾಮೆ ಪಡೆಯಬೇಕು’ ಎಂದರು.
ಕುಣಿಗಲ್ ವೃತ್ತದಲ್ಲಿ ಜಮಾಯಿಸಿದ ಒಕ್ಕಲಿಗರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಮಾನವ ಸರಪಳಿ ನಿರ್ಮಿಸಿ ಜಮೀರ್ ವಿರುದ್ಧ ಘೋಷಣೆ ಕೂಗಿದರು. ಜಮೀರ್ ಅವರ ಪ್ರತಿಕೃತಿಯನ್ನು ದಹಿಸಿದರು. ತಾಲ್ಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಪತ್ರ ಸಲ್ಲಿಸಿದರು.
ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆ.ತಿಮ್ಮರಾಜು, ಜೆಡಿಎಸ್ ಮುಖಂಡ ಟಿ.ತಿಮ್ಮರಾಯಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಸದಸ್ಯ ಆಂಜನಮೂರ್ತಿ(ಪಾಪಣ್ಣಿ), ಒಕ್ಕಲಿಗರ ಯುವ ವೇದಿಕೆಯ ಸುರೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.