ADVERTISEMENT

ಜೀಬ್ರಾ ಮರಿ ಜನನ: ಕಳೆಗಟ್ಟಿದ ಮೃಗಾಲಯ

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿ ಆಗಮನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 18:34 IST
Last Updated 3 ಅಕ್ಟೋಬರ್ 2020, 18:34 IST
ಅಮ್ಮನೊಂದಿಗೆ ಹೆಮ್ಮೆಯ ನಡಿಗೆ...ಬನ್ನೇರುಘಟ್ಟ ಜೈವಿಕ ಉದ್ಯಾನದ ಮೃಗಾಲಯದಲ್ಲಿ ಭಾನುವಾರ ಜನಿಸಿದ ಜೀಬ್ರಾ ಮರಿ ತಾಯಿ ಕಾವೇರಿಯೊಂದಿಗೆ ಸ್ವಚ್ಛಂದವಾಗಿ ವಿಹರಿಸುತ್ತಿದೆ.
ಅಮ್ಮನೊಂದಿಗೆ ಹೆಮ್ಮೆಯ ನಡಿಗೆ...ಬನ್ನೇರುಘಟ್ಟ ಜೈವಿಕ ಉದ್ಯಾನದ ಮೃಗಾಲಯದಲ್ಲಿ ಭಾನುವಾರ ಜನಿಸಿದ ಜೀಬ್ರಾ ಮರಿ ತಾಯಿ ಕಾವೇರಿಯೊಂದಿಗೆ ಸ್ವಚ್ಛಂದವಾಗಿ ವಿಹರಿಸುತ್ತಿದೆ.   

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಇತ್ತೀಚೆಗೆಹೊಸ ಅತಿಥಿಯ ಆಗಮನವಾಗಿದೆ. ಇದರಿಂದಮೃಗಾಲಯ ಕಳೆಗಟ್ಟಿದೆ.

ಮೃಗಾಲಯದ ಕಾವೇರಿ ಎಂಬ ಜೀಬ್ರಾ ಸೆ 27ರಂದು ರಾತ್ರಿ 8 ಗಂಟೆಗೆ ಹೆಣ್ಣು ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಎರಡೂ ಆರೋಗ್ಯವಾಗಿವೆ ಎಂದುಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜನಿಸುತ್ತಿರುವ ಮೂರನೇ ಜೀಬ್ರಾ ಮರಿ ಇದು.ಹೊಸ ಅತಿಥಿಯ ಆಗಮನದೊಂದಿಗೆ ಮೃಗಾಲಯದ ಒಟ್ಟು ಜೀಬ್ರಾಗಳ ಸಂಖ್ಯೆ ನಾಲ್ಕಕ್ಕೆ ಏರಿದಂತಾಗಿದೆ.

ADVERTISEMENT

ಕಾವೇರಿ ಮತ್ತು ಭರತ್‌ ಜೋಡಿಗೆ ಜನಿಸಿರುವ ಮರಿಯು ಆರೋಗ್ಯವಾಗಿದ್ದು ಮೃಗಾಲಯದ ಸಿಬ್ಬಂದಿ ತಾಯಿ, ಮರಿಯನ್ನು ಜೋಪಾನವಾಗಿ ಆರೈಕೆ ಮಾಡುತ್ತಿದ್ದಾರೆ. ತಾಯಿಗೆ ಬೂಸಾ, ಗಜ್ಜರಿ‌, ಖನಿಜಾಂಶಯುಕ್ತ ಆಹಾರ, ಹುಲ್ಲು ನೀಡಲಾಗುತ್ತಿದೆ.

ತಾಯಿಯ ಜತೆ ತುಂಟ ಮರಿಯ ವಿಹಾರ ಮತ್ತು ಚಿನ್ನಾಟ ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಮುದ್ದಾದ ಮರಿಗೆ ಆಕರ್ಷಕ ಹೆಸರಿನ ಹುಡುಕಾಟ ನಡೆದಿದೆ.

ಇನ್ಫೊಸಿಸ್‌ ಪ್ರತಿಷ್ಠಾನ2016ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೀಬ್ರಾ ಆವರಣ ನಿರ್ಮಿಸಿಕೊಟ್ಟಿದೆ. ಕೇಂದ್ರದಲ್ಲಿ ಸಂತಾನೋತ್ಪತ್ತಿಗೆ ಉತ್ತಮ ವಾತಾವರಣವಿದೆ ಎಂದು ವನಶ್ರೀ ತಿಳಿಸಿದ್ದಾರೆ.

ರಾತ್ರಿ ವೇಳೆಯೇ ಹೆಚ್ಚಾಗಿ ಪ್ರಸವ!

ಸಾಮಾನ್ಯವಾಗಿ ಜೀಬ್ರಾಗಳ ಗರ್ಭಾವಸ್ಥೆಯ ಅವಧಿ ಒಂದು ವರ್ಷವಾಗಿದ್ದು, ಹೆಚ್ಚಾಗಿ ರಾತ್ರಿ ಸಮಯದಲ್ಲಿಯೇ ಮರಿಗಳಿಗೆ ಜನ್ಮ ನೀಡುತ್ತವೆ. ಪ್ರಸವ ಸಮಯವು 8 ರಿಂದ 10 ನಿಮಿಷಗಳದ್ದಾಗಿದ್ದು, ಮರಿ ಜನಿಸಿದ ಗಂಟೆಯೊಳಗೆ ಎದ್ದು ಓಡಾಡಲು ಆರಂಭಿಸುತ್ತದೆ. ಆರಂಭದ ಕೆಲವು ದಿನ ಗುಂಪಿನ ಪ್ರಬಲ ಗಂಡಿನ ಜತೆಗೂಡಿ ತಾಯಿ ಜೀಬ್ರಾ ತನ್ನ ನವಜಾತ ಮರಿಯನ್ನು ಇತರೆ ಜೀಬ್ರಾ ಗುಂಪಿನಿಂದ ರಕ್ಷಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.