ಬೆಂಗಳೂರು: ಸ್ಥಳೀಯ ನಗರ ಯೋಜನಾ ಪ್ರಾಧಿಕಾರಗಳು ಸರ್ಕಾರದ ಅನುಮೋದನೆ ಪಡೆದು ಜಾರಿಗೊಳಿಸುತ್ತಿರುವ ನಗರ ಮಹಾ ಯೋಜನೆಗಳ ಕೆಲವು ವಲಯ ನಿಬಂಧನೆಗಳನ್ನು ನಗರಾಭಿವೃದ್ಧಿ ಇಲಾಖೆ ಮಾರ್ಪಾಡುಗೊಳಿಸಿದೆ. ಗರಿಷ್ಠ 5 ಎಫ್‌ಎಆರ್ ನೀಡುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.
ರಾಜೀವ ಗಾಂಧಿ ವಸತಿ ನಿಗಮ ಜಾರಿಗೊಳಿಸುತ್ತಿರುವ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ಜಾರಿಗೊಳಿಸುತ್ತಿರುವ ಕೆಲವು ಪುನರ್ವಸತಿ ಯೋಜನೆಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಸೋಮವಾರ ರಾಜ್ಯಪತ್ರದಲ್ಲಿ ಪ್ರಕಟಿಸಿರುವ ಅಧಿಸೂಚನೆಯಲ್ಲಿ ಹೇಳಿದೆ.
1961ರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಸೆಕ್ಷನ್ 13 ಇ ಅನ್ವಯ ಈ ಮಾರ್ಪಾಡು ಮಾಡಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಸೇರಿದಂತೆ, ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳು ಜಾರಿಗೊಳಿಸುತ್ತಿರುವ ನಗರ ಮಹಾಯೋಜನೆಗಳ ವಲಯ ನಿಬಂಧನೆಗಳಿಗೂ ಈ ಮಾರ್ಪಾಡುಗಳು ಅನ್ವಯವಾಗಲಿವೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಮಾರ್ಪಾಡುಗಳೇನು?
* ನೆಲ ಮಹಡಿಯ ವ್ಯಾಖ್ಯಾನದ ಮುಂದೆ, ‘ಸರ್ಕಾರಿ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಕೈಗೆಟಕುವ ವಸತಿ ಯೋಜನೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನೆಲ ಮಹಡಿಯಲ್ಲಿ ಈ ನಿಬಂಧನೆಗಳಲ್ಲಿ ನಿರ್ದಿಷ್ಟಪಡಿಸಿರುವಷ್ಟು ಜಾಗವನ್ನು ವಾಹನ ನಿಲುಗಡೆಗೆ ಮೀಸಲಿಟ್ಟ ಬಳಿಕ, ಶೇ 20ರಷ್ಟು ಜಾಗವನ್ನು ಅಂಗವಿಕಲ ಫಲಾನುಭವಿಗಳ ವಸತಿಗೆ ಬಿಟ್ಟುಕೊಡಬಹುದು’ ಎಂದು ಸೇರ್ಪಡೆಗೊಳಿಸಲಾಗಿದೆ.
* 15 ಮೀ ಎತ್ತರದವರೆಗಿನ ಕಟ್ಟಡಗಳಿಗೆ ಕನಿಷ್ಠ ರಸ್ತೆ ಅಗಲ 7 ಮೀ.
* 15 ಮೀಟರ್‌ನಿಂದ 45 ಮೀಟರ್‌ಗಳವರೆಗಿನ ಕಟ್ಟಡಗಳಿಗೆ (ನೆಲಮಹಡಿ ಮತ್ತು 14 ಮಹಡಿಗಳು) ಕನಿಷ್ಠ ರಸ್ತೆ ಅಗಲ 9 ಮೀ
* ತಲಾ 50 ಚದರ ಮೀ. ಕಾರ್ಪೆಟ್ ಪ್ರದೇಶಗಳ ಪ್ರತಿ ಆರು ವಸತಿ ಘಟಕಗಳಿಗೆ ಒಂದರಂತೆ ವಾಹನ ನಿಲುಗಡೆ ಜಾಗವನ್ನು ಮೀಸಲಿಡಬೇಕು
* ಬಹುಮಹಡಿ ಕಟ್ಟಡಗಳಲ್ಲಿ ಕಾರಿಡಾರ್‌ಗಳ ಕನಿಷ್ಠ ಅಗಲ 1.80 ಮೀ. ಇರಬೇಕು
* ರಾಜೀವ ಗಾಂಧಿ ವಸತಿ ನಿಗಮವು ಕೈಗೆತ್ತಿಕೊಂಡಿರುವ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ವಿಶೇಷ ಸಂದರ್ಭವೆಂದು ಪರಿಗಣಿಸಿ, ಅದಕ್ಕೆ ಎಲ್ಲ ಭೂಬಳಕೆ ವಲಯಗಳಲ್ಲೂ ಅನುಮತಿ ನೀಡಬೇಕು. ನಗರ ಮಹಾ ಯೋಜನೆಯಲ್ಲಿ ಪ್ರಸ್ತಾಪಿಸಿರುವ ರಸ್ತೆಗಳನ್ನು ನಿರ್ಮಿಸಲು ಅನುಕೂಲವಾಗುವಂತೆ ನೋಡಿಕೊಂಡು ಅನುಮತಿ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.