ADVERTISEMENT

ಪ್ರಗತಿಗೆ ಪತ್ರಿಕೆಗಳ ಕೊಡುಗೆ ಸ್ಮರಣೀಯ

ಪತ್ರಿಕಾ ದಿನಾಚರಣೆಯಲ್ಲಿ ಸಚಿವ ಖಂಡ್ರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 7:25 IST
Last Updated 26 ಜುಲೈ 2016, 7:25 IST
ಪ್ರಗತಿಗೆ ಪತ್ರಿಕೆಗಳ ಕೊಡುಗೆ ಸ್ಮರಣೀಯ
ಪ್ರಗತಿಗೆ ಪತ್ರಿಕೆಗಳ ಕೊಡುಗೆ ಸ್ಮರಣೀಯ   

ಭಾಲ್ಕಿ: ‘ಪತ್ರಿಕೆಗಳು ಸರ್ಕಾರದ ಪ್ರತಿ ನಡೆಯ ಮೇಲೆ ಕಣ್ಣಿಡುವುದರ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸುತ್ತವೆ’ ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಈಶ್ವರ ಖಂಡ್ರೆ ಹೇಳಿದರು.

’ತಾಲ್ಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಿಕೆ ದಿನಾಚರಣೆ ಹಾಗೂ ನೂತನ ಸಚಿವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

’ದೇಶದ ಅಭಿವೃದ್ಧಿ, ಏಕತೆ, ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖ. ಪತ್ರಿಕೆಗಳು ಬಂಡವಾಳ ಶಾಹಿಗಳ ಕಪಿ­ಮುಷ್ಟಿಗೆ ಒಳಗಾಗದೆ ಸತ್ಯವನ್ನು ಸಮಾ­ಜಕ್ಕೆ ತೋರಿಸಬೇಕು. ಪತ್ರಕರ್ತರು ಪ್ರಾಮಾ­ಣಿಕ, ನಿಷ್ಠ ವರದಿಗೆ ಹೆಚ್ಚಿನ ಮಹತ್ವ ನೀಡುವುದರ ಜತೆಗೆ ಸಮಾಜ­ದಲ್ಲಿ ನೊಂದವರ, ಬಡವರ  ಧ್ವನಿಯಾಗಿ ಕೆಲಸ ಮಾಡಬೇಕು’ ಎಂದರು.

‘ವಿದ್ಯಾರ್ಥಿಗಳು ಆತ್ಮವಿಶ್ವಾಸ­ದೊಂದಿಗೆ ಅಭ್ಯಸಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನನೆಗುದಿಗೆ ಬಿದ್ದಿರುವ ಕೆಲಸಗಳಿಗೆ ಚುರುಕು ಮುಟ್ಟಿಸಲಾಗು­ವುದು’ ಎಂದು ತಿಳಿಸಿದರು.

ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಪತ್ರಿಕೆಗಳು ಅಪರಾಧ, ಕೆಟ್ಟ ವರದಿ­ಗಳನ್ನು ಹೆಚ್ಚು ವೈಭವಿಕರಿಸದೆ ಒಳ್ಳೆಯ ಸುದ್ದಿಗಳಿಗೆ ಆದ್ಯತೆ ನೀಡಬೇಕು’ ಎಂದರು.

ಹಿರೇಮಠ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಸಮಾಜದ ಒಳಿತಿಗೆ ಪತ್ರಿಕೆಗಳು ಹೆಚ್ಚು ಒತ್ತು ಕೊಡಬೇಕು ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ಬಿರಾದಾರ್, ಅಶೋಕ ರಾಜೋಳೆ ಮಾತನಾಡಿ ಕನ್ನಡ ಪತ್ರಿಕೆ ನಡೆದು ಬಂದ ದಾರಿ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಎಂಜಿಎಸ್‍ಎಸ್‌ಕೆ ನಿರ್ದೇಶಕ ಶಿವಶಂಕರ ಪಾಟೀಲ್, ತಳವಾಡ(ಕೆ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೀರಭದ್ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ ಕಡಂಗಚಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಶಶಿಧರ ಕೋಸಂಬೆ, ಎಪಿಎಂಸಿ ಮಾಜಿ ಅಧ್ಯಕ್ಷ ಬಾಬುರಾವ ವೀರಶೆಟ್ಟೆ ಸೇರಿದಂತೆ ಪತ್ರಕರ್ತರು ಇದ್ದರು.

ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಿಸಿ, ವಂದಿಸಿದರು.

***
ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕುವಲ್ಲಿ, ಸಾರ್ವಜನಿಕರ ಮತ್ತು ಸರ್ಕಾರದ ಮಧ್ಯೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಪತ್ರಿಕೆ ಪಾತ್ರ ಹಿರಿದು.
–ಈಶ್ವರ ಖಂಡ್ರೆ, ಪೌರಾಡಳಿತ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.