ADVERTISEMENT

ಸುರ್ರಾ ರೋಗ: ಔರಾದ್‌ನಲ್ಲಿ 11 ಕತ್ತೆಗಳ ಸಾವು

ಕಲ್ಯಾಣ ಕರ್ನಾಟಕದಲ್ಲೇ ಮೊದಲ ಬಾರಿಗೆ ರೋಗ ಪತ್ತೆ

ಚಂದ್ರಕಾಂತ ಮಸಾನಿ
Published 30 ಅಕ್ಟೋಬರ್ 2020, 16:30 IST
Last Updated 30 ಅಕ್ಟೋಬರ್ 2020, 16:30 IST
ಔರಾದ್‌ ತಾಲ್ಲೂಕಿನ ಹಾಲಹಳ್ಳಿಯಲ್ಲಿ ಕತ್ತೆಗಳ ಆರೋಗ್ಯ ತಪಾಸಣೆ ಮಾಡಿ ಚುಚ್ಚುಮದ್ದು ನೀಡಿದ ಪಶು ವೈದ್ಯರು
ಔರಾದ್‌ ತಾಲ್ಲೂಕಿನ ಹಾಲಹಳ್ಳಿಯಲ್ಲಿ ಕತ್ತೆಗಳ ಆರೋಗ್ಯ ತಪಾಸಣೆ ಮಾಡಿ ಚುಚ್ಚುಮದ್ದು ನೀಡಿದ ಪಶು ವೈದ್ಯರು   

ಬೀದರ್‌: ಜಾನುವಾರುಗಳಿಗೆ ಬಂದಿರುವ ಚರ್ಮ ಗಡ್ಡೆ ರೋಗ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆಗಲೇ ಮತ್ತೊಂದು ರೋಗ ಕಾಣಿಸಿಕೊಂಡು ಎರಡು ವಾರಗಳಲ್ಲಿ ಔರಾದ್‌ ತಾಲ್ಲೂಕಿನಲ್ಲಿ 11 ಕತ್ತೆಗಳು ಮೃತಪಟ್ಟಿವೆ.

ಔರಾದ್‌ ತಾಲ್ಲೂಕಿನ ಹಾಲಹಳ್ಳಿ, ಬಳತ (ಬಿ), ನಿಡೋದಾ ಹಾಗೂ ಕೊಳ್ಳೂರ್ ಗ್ರಾಮಗಳಲ್ಲಿ ಕತ್ತೆಗಳು ನಿಗೂಢವಾಗಿ ಸಾವಿಗೀಡಾಗುತ್ತಿವೆ. ಕತ್ತೆ ಮಾಲೀಕ ಧೋಂಡಿಬಾ ದೂರು ನೀಡಿದ ನಂತರ ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಅತಿಯಾದ ಜ್ವರ, ಉಸಿರಾಟದ ತೊಂದರೆ ಹಾಗೂ ಕಾಲುಗಳಲ್ಲಿ ಊತ ಬಂದು ಕತ್ತೆಗಳು ಮೃತಪಟ್ಟಿರುವುದು ದೃಢಪಟ್ಟಿತ್ತು.

‘ಸತ್ತ ಕತ್ತೆಗಳ ರಕ್ತದ ಮಾದರಿ ಪರೀಕ್ಷಿಸಿದಾಗ ಟ್ರಿಪನಾಸೋಮಾ ಎನ್ನುವ ರಕ್ತದ ಪರಾವಲಂಬಿ (ಪ್ರೊಟೋಝೋವಾ) ಜೀವಿಯಿಂದ ಬರುವ ‘ಸುರ್ರಾ’ ರೋಗ ಬಂದಿರುವುದು ದೃಢಪಟ್ಟಿದೆ. ಕತ್ತೆಗಳ ದೇಹದಲ್ಲಿ ಪರಾವಲಂಬಿ ಸೇರಿಕೊಂಡು ರಕ್ತ ಹೀರಿ ನಿತ್ರಾಣಗೊಳಿಸುತ್ತವೆ. ರಕ್ತ ಹೀನತೆಯಿಂದ ಬಳಲಿ ಸಾವಿಗೀಡಾಗುತ್ತವೆ’ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಮಲ್ಲಿಕಾರ್ಜುನ ಹಂಚನಾಳ ತಿಳಿಸಿದ್ದಾರೆ.

ADVERTISEMENT

‘ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ರೋಗ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ವಹಿಸುವಂತೆ ಜಾನುವಾರು ಮಾಲೀಕರಿಗೆ ಸೂಚಿಸಲಾಗಿದೆ. ರಕ್ತ ಹೀನತೆ ಉಂಟಾಗದಂತೆ ಔಷಧ ಹಾಗೂ ಮಾತ್ರೆಗಳನ್ನು ಕೊಡಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಕತ್ತೆ ಹಾಗೂ ಕುದುರೆಗಳ ಮೇಲೆ ನಿಗಾ ಇಡಲಾಗಿದೆ. ರೋಗ ಲಕ್ಷಣ ಕಂಡು ಬಂದ 150 ಕತ್ತೆಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ’ ಎಂದು ಹೇಳಿದ್ದಾರೆ.

ಸುರ್ರಾ ರೋಗ ಕುದುರೆ, ನಾಯಿ, ಬೆಕ್ಕು, ಕುರಿ ಹಾಗೂ ಮೇಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇಲಾಖೆಯಲ್ಲಿ ರೋಗ ನಿರೋಧಕ ಚುಚ್ಚುಮದ್ದು, ಮಾತ್ರೆ ಹಾಗೂ ಔಷಧ ಲಭ್ಯ ಇದೆ. ಈಗಾಗಲೇ ಕತ್ತೆ ಮಾಲೀಕರಿಗೆ ಔಷಧಗಳನ್ನು ವಿತರಿಸಲಾಗಿದೆ.

ಪಾಲಿಕ್ಲಿನಿಕ್‌ ಉಪನಿರ್ದೇಶಕ ಡಾ.ರವೀಂದ್ರಕುಮಾರ ಭೂರೆ, ಪಶುವೈದ್ಯ ಡಾ.ಸೋಮಲಿಂಗ ಝಂಡೆ, ಪಶು ಸಂಗೋಪಣಾ ಇಲಾಖೆ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ.ಶಿವಮೂರ್ತಿ ನೇತೃತ್ವದ ತಂಡ ರೋಗ ಪೀಡಿತ ಕತ್ತೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವಲ್ಲಿ ನಿರತವಾಗಿದೆ.

ಜಿಲ್ಲೆಯ ಔರಾದ್‌ ಹಾಗೂ ಕಮಲನಗರದ ಗಡಿ ಗ್ರಾಮಗಳಲ್ಲಿ ಸಾರಿಗೆ ಸಂಪರ್ಕದ ಕೊರತೆ ಇದೆ. ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆದ ಆಹಾರ ಧಾನ್ಯಗಳನ್ನು ತರಲು ಹಾಗೂ ಅಗತ್ಯ ಸಾಮಗ್ರಿಗಳನ್ನು ಗ್ರಾಮಗಳಿಗೆ ಒಯ್ಯಲು ಈಗಲೂ ಕೆಲವರು ಕತ್ತೆಗಳನ್ನೇ ಬಳಸುತ್ತಾರೆ. ಅವಿಭಜಿತ ಔರಾದ್‌ ತಾಲ್ಲೂಕಿನಲ್ಲಿ 1,680 ಕತ್ತೆಗಳು ಹಾಗೂ ಜಿಲ್ಲೆಯಲ್ಲಿ ಒಟ್ಟು 42 ಕುದುರೆಗಳು ಇವೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೀದರ್‌ನಲ್ಲಿ ಕುದುರೆಗಳಿಗೆ ಗ್ಲ್ಯಾಂಡರ್ಸ್ ರೋಗ ಕಾಣಿಸಿಕೊಂಡಿತ್ತು. ನಗರದ ಚಿದ್ರಿಯ ಐದು ಕಿ.ಮೀ ವ್ಯಾಪ್ತಿಯನ್ನು ಸಾಂಕ್ರಾಮಿಕ ವಲಯ ಎಂದು ಸರ್ಕಾರ ಘೋಷಿಸಿತ್ತು. ಒಟ್ಟು 15 ಕುದುರೆಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಹರಿಯಾಣದ ರಾಷ್ಟ್ರೀಯ ಅಶ್ವ ಅನುಸಂಧಾನ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿತ್ತು. ನಂತರ 25 ಕಿ.ಮೀ ವ್ಯಾಪ್ತಿಯಲ್ಲಿನ ಕುದುರೆ, ಕತ್ತೆಗಳ ರಕ್ತದ ಮಾದರಿಯನ್ನೂ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ಚಿಕಿತ್ಸೆ ನೀಡಿ ರೋಗ ನಿಯಂತ್ರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.