ADVERTISEMENT

ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ 12 ಜನ: ರೋಗಿಗಳ ರಕ್ಷಣೆ

ಸುರಕ್ಷಿತವಾಗಿ ಹೊರ ತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 14:33 IST
Last Updated 24 ಜನವರಿ 2019, 14:33 IST
ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯ ಲಿಫ್ಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಿಲುಕಿಕೊಂಡಿದ್ದ ರೋಗಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದರು
ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯ ಲಿಫ್ಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಿಲುಕಿಕೊಂಡಿದ್ದ ರೋಗಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದರು   

ಬೀದರ್: ನಗರದ ಬ್ರಿಮ್ಸ್‌ ಆಸ್ಪತ್ರೆಯ ಒಂದನೆಯ ಮಹಡಿಯ ಲಿಫ್ಟ್‌ನಲ್ಲಿ ಗುರುವಾರ ಬೆಳಿಗ್ಗೆ ತಾಂತ್ರಿಕ ದೋಷ ಕಾಣಿಸಿಕೊಂಡು ಅದರಲ್ಲಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರು ಒಂದು ಗಂಟೆಗೂ ಹೆಚ್ಚು ಹೊತ್ತು ನರಳಾಡಿದರು.

ಆಸ್ಪತ್ರೆಯ ಆರನೇ ಮಹಡಿಯಿಂದ ಮೂರನೇ ಮಹಡಿಯ ವರೆಗೆ ಶಸ್ತ್ರಚಿಕಿತ್ಸಾ ಕೊಠಡಿ, ಎಲುಬು ಕೀಳುಗಳ ವಾರ್ಡ್, ಮಕ್ಕಳ ಹಾಗೂ ಮಹಿಳಾ ವಾರ್ಡ್‌ಗಳಿವೆ. ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳು ಹಾಗೂ ಅವರ ಸಂಬಂಧಿಗಳು ಐದನೆಯ ಹಾಗೂ ನಾಲ್ಕನೆಯ ಮಹಡಿಯಿಂದ ಕೆಳಗೆ ಬರುತ್ತಿದ್ದಾಗ ಒಂದನೆಯ ಮಹಡಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಲಿಫ್ಟ್‌ ಬಾಗಿಲು ತೆರೆದುಕೊಳ್ಳಲಿಲ್ಲ.

ಲಿಫ್ಟ್‌ನಲ್ಲಿದ್ದವರು ಗಾಬರಿಗೊಂಡು ಕಿರುಚಾಡಲು ಶುರು ಮಾಡಿದರು. ಟೆಕ್ನಿಷಿಯನ್‌ ತಕ್ಷಣ ಮೇಲ್ಭಾಗದಲ್ಲಿ ಹೋಗಿ ಬಾಗಿಲುಗಳನ್ನು ತೆರೆದು ಗಾಳಿಯಾಡುವಂತೆ ಮಾಡಿದರು. ದೋಷ ಸರಿಪಡಿಸಲು ಪ್ರಯತ್ನಿಸಿದರೂ
ಫಲ ನೀಡಲಿಲ್ಲ. ಜಿಲ್ಲಾ ಸರ್ಜನ್‌ ಡಾ.ಸಿ.ಎಸ್‌.ರಗಟೆ ಸ್ಥಳಕ್ಕೆ ಬಂದು ಪರಿಶೀಲಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

ADVERTISEMENT

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಹೈಡ್ರೋಲಿಕ್‌ ಸಲಕರಣೆಯೊಂದಿಗೆ ಲಿಫ್ಟ್‌ ಬಾಗಿಲನ್ನು ಮುರಿದು ರೋಗಿಗಳನ್ನು ಹೊರಗೆ ಕರೆ ತಂದರು. ಲಿಫ್ಟ್‌ನಿಂದ ಹೊರ ಬರುತ್ತಲ್ಲೇ ಒಂದಿಬ್ಬರು ಗಾಬರಿಯಿಂದ ಓಡಿ ಹೋದರು.

‘ತಾಂತ್ರಿಕ ದೋಷದಿಂದ ಒಂದು ಗಂಟೆಗೂ ಹೆಚ್ಚು ಅವಧಿಗೆ ಲಿಫ್ಟ್‌ ಸ್ಥಗಿತಗೊಂಡಿತ್ತು. ಲಿಫ್ಟ್‌ನಲ್ಲಿ ಫ್ಯಾನ್‌ ಹಾಗೂ ಲೈಟ್‌ ಇತ್ತು. ಬಹಳ ಹೊತ್ತಿನ ವರೆಗೂ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಕೆಲವರು ಗಾಬರಿಗೊಂಡಿದ್ದರು.
ಸುರಕ್ಷಿತವಾಗಿ ಹೊರಗೆ ತೆಗೆದ ನಂತರ ಒಂದು ಶಿಶು, ಮಹಿಳೆಯರು ಹಾಗೂ ಡಿ. ದರ್ಜೆ ನೌಕರರು ಮನೆಗೆ ತೆರಳಿದರು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಎಸ್‌.ರಗಟೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.