ಬಸವಕಲ್ಯಾಣ: ‘ಜಿಲ್ಲಾ ಕೇಂದ್ರ ಗ್ರಂಥಾಲಯ ಶಿಥಿಲಗೊಂಡಿದ್ದರಿಂದ ಹೊಸ ಕಟ್ಟಡಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ₹2 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು ಶೀಘ್ರ ಕಾಮಗಾರಿ ಆರಂಭ ಆಗಲಿದೆ’ ಎಂದು ಗ್ರಂಥಾಲಯ ಶಾಖಾಧಿಕಾರಿ ನಿಂಗಪ್ಪ ತುಂಬಗಿ ತಿಳಿಸಿದ್ದಾರೆ.
ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಯಲ್ಲಿ ಗುರುವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ನಡೆದ ಪುಸ್ತಕ ಪ್ರದರ್ಶನ ಮತ್ತು ಓದುಗರ ಸದಸ್ಯತ್ವ ನೋಂದಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಅವರು ಮಾತನಾಡಿ, ‘ಗ್ರಂಥಾಲಯದಿಂದ ಸಾಮಾನ್ಯ ಜನರಿಗೆ, ವಿದ್ಯಾರ್ಥಿಗಳಿಗೆ ಜ್ಞಾನ ಪಡೆದುಕೊಳ್ಳಲು ಅನುಕೂಲವಾಗಿದೆ. ಹೆಚ್ಚಿನ ಓದುಗರು ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿ, ‘ನಿರಂತರ ಓದಿನಿಂದ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ. ಪ್ರಜಾಪ್ರಭುತ್ವವಾದಿ ನಿಲುವು ಗಟ್ಟಿಯಾಗಿ ಸಮಾಜದಲ್ಲಿ ಸೌಹಾರ್ದದ ವಾತಾವರಣ ಸೃಷ್ಟಿಯಾಗಲು ಸಾಧ್ಯ’ ಎಂದು ಹೇಳಿದರು.
ಪ್ರಾಧ್ಯಾಪಕ ಭೀಮಾಶಂಕರ ಬಿರಾದಾರ ಮಾತನಾಡಿ, ‘ಸಂಶೋಧನೆ ಕೈಗೊಳ್ಳುವವರಿಗೆ ಗ್ರಂಥಾಲಯಗಳು ಸಹಕಾರಿಯಾಗಿವೆ’ ಎಂದು ಹೇಳಿದರು.
ಮುಖಂಡ ಲೋಕೇಶ ಕನಕ, ಅಂಬರೀಶ ಮೇತ್ರೆ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿ ವಿಷ್ಣು ಸುಧೀರ್ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ವೀರಣ್ಣ ಮಂಠಾಳಕರ, ದೀಪಾಲಿ ಮಾನೆ, ನವನಾಥ ಬಿರಾದಾರ, ಮಾನ್ವಿ ಸದಾಶಿವ ಉಪಸ್ಥಿತರಿದ್ದರು. ನವೆಂಬರ್ 21ರವರೆಗೆ ಪುಸ್ತಕ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.