ADVERTISEMENT

14 ಠಾಣೆ ವ್ಯಾಪ್ತಿಯ 28 ಪ್ರಕರಣ ಭೇದಿಸಿದ ಬೀದರ್‌ ಪೊಲೀಸರು: 28 ಆರೋಪಿಗಳ ಬಂಧನ

₹54.96 ಲಕ್ಷ ಸ್ವತ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 16:23 IST
Last Updated 12 ಮಾರ್ಚ್ 2024, 16:23 IST
ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಜಪ್ತಿ ಮಾಡಿಕೊಂಡ ಚಿನ್ನಾಭರಣ, ಪಂಪ್‌ಸೆಟ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಬೀದರ್‌ನಲ್ಲಿ ಮಂಗಳವಾರ ಪರಿಶೀಲಿಸಿದರು
ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಜಪ್ತಿ ಮಾಡಿಕೊಂಡ ಚಿನ್ನಾಭರಣ, ಪಂಪ್‌ಸೆಟ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಬೀದರ್‌ನಲ್ಲಿ ಮಂಗಳವಾರ ಪರಿಶೀಲಿಸಿದರು   

ಬೀದರ್‌: ಜಿಲ್ಲೆಯ 14 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿನ 28 ಪ್ರಕರಣಗಳನ್ನು ಭೇದಿಸಿರುವ ಬೀದರ್‌ ಜಿಲ್ಲಾ ಪೊಲೀಸರು 28 ಆರೋಪಿಗಳನ್ನು ಬಂಧಿಸಿ, ಅವರಿಂದ ₹54.96 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿಕೊಂಡಿದ್ದಾರೆ.

‘ಬೀದರ್‌ ಉಪವಿಭಾಗದಲ್ಲಿ 2, ಭಾಲ್ಕಿಯಲ್ಲಿ 8 ಹಾಗೂ ಹುಮನಾಬಾದ್‌ ಉಪವಿಭಾಗದ ಪೊಲೀಸ್‌ ಠಾಣೆಗಳಲ್ಲಿ 18 ಪ್ರಕರಣಗಳು ದಾಖಲಾಗಿದ್ದವು. ಕಳೆದ 15 ದಿನಗಳಲ್ಲಿ 28 ಪ್ರಕರಣಗಳನ್ನು ಭೇದಿಸಿ 28 ಆರೋಪಿಗಳನ್ನು ಬಂಧಿಸಿ, ಅವರಿಂದ ₹54.96 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಎಲ್ಲ ಪ್ರಕರಣ ಭೇದಿಸಿದ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ನಗರದ ಪೊಲೀಸ್‌ ಹೆಡ್‌ ಕ್ವಾರ್ಟರ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

₹7.76 ಲಕ್ಷ ನಗದು, ₹24.32 ಲಕ್ಷ ಮೌಲ್ಯದ 396 ಗ್ರಾಂ ಬಂಗಾರ, 320 ಗ್ರಾಂ ಬೆಳ್ಳಿ ಆಭರಣಗಳು, ₹3.52 ಲಕ್ಷ ಮೌಲ್ಯದ ಏಳು ಜಾನುವಾರು, ಎರಡು ಸೋಯಾ ಚೀಲ, 355 ಕೆ.ಜಿ ವಿದ್ಯುತ್‌ ತಂತಿ, ₹19.36 ಲಕ್ಷ ಬೆಲೆಬಾಳುವ ಒಂದು ಆಟೊ, ಮೂರು ನಾಲ್ಕು ಚಕ್ರದ ವಾಹನ, ಎಂಟು ಬೈಕ್‌, ಆರು ಪಂಪ್‌ಸೆಟ್‌, ಮದ್ಯ ಸೇರಿದೆ. ಬಂಧಿತ 28 ಆರೋಪಿಗಳಲ್ಲಿ ಕೆಲವರು ಅಂತರರಾಜ್ಯ ಕಳ್ಳರು ಸೇರಿದ್ದಾರೆ ಎಂದು ವಿವರಿಸಿದರು.

ADVERTISEMENT

ಒಂದು ಮನೆ ಕಳ್ಳತನ ಪ್ರಕರಣದಲ್ಲಿ ಹೈದರಾಬಾದಿನ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆತ ₹4 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದ ಎಂದು ತಿಳಿಸಿದರು.

ಓಲ್ಡ್‌ ಸಿಟಿಯಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ:

ರಂಜಾನ್‌ ಪವಿತ್ರ ಮಾಸ ಆರಂಭವಾಗಿದ್ದು, ನಗರದ ಓಲ್ಡ್‌ ಸಿಟಿಯಲ್ಲಿ ಪ್ರಾರ್ಥನೆ ಸೇರಿದಂತೆ ಇತರೆ ಕಾರ್ಯಕ್ಕೆ ಹೆಚ್ಚಿನ ಜನ ಸೇರುತ್ತಾರೆ ಎಂಬುದು ಗಮನಕ್ಕೆ ಬಂದಿದೆ. ಇತ್ತೀಚೆಗೆ ಶಾಂತಿ ಸಭೆ ಕೂಡ ನಡೆಸಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಸಂಚಾರ ವ್ಯವಸ್ಥೆ ಸುಗಮವಾಗಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಜೆ.ಎಸ್‌. ನ್ಯಾಮೆಗೌಡರ್‌ ಇತರರು ಹಾಜರಿದ್ದರು.

₹1 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ಜಪ್ತಿ

‘ಕಾಳಸಂತೆಯಲ್ಲಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ₹1 ಕೋಟಿ ಮೌಲ್ಯದ 980 ಗ್ರಾಂ ತಿಮಿಂಗಿಲ ವಾಂತಿ (ಅಂಬರ್‌ ಗ್ರೀಸ್‌) ಜಪ್ತಿ ಮಾಡಿ ಒಂದೇ ಗ್ಯಾಂಗಿನ ಮೂವರನ್ನು ಬಂಧಿಸಲಾಗಿದೆ. ಮೂವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಗೆ ಸೇರಿದವರಾಗಿದ್ದಾರೆ. ಇವರ ವಿರುದ್ಧ ಬಸವಕಲ್ಯಾಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು.

ಐವರ ಗಡಿಪಾರು

ಘೋರ ಅಪರಾಧ ಕೃತ್ಯಗಳಲ್ಲಿ ಶಾಮಿಲಾಗಿದ್ದ ಐವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಜರುಗಿಸಲಾಗಿದೆ. ಒಂದು ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ. ಐವರ ಪೈಕಿ ಒಬ್ಬನ ವಿರುದ್ಧ ಶಾಂತಿ ಸೌಹಾರ್ದತೆಗೆ ಧಕ್ಕೆ ಕಳ್ಳತನ ಮಾರಣಾಂತಿಕ ಹಲ್ಲೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಒಟ್ಟು 20 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದರೂ ಸುಧಾರಿಸಿಕೊಂಡಿಲ್ಲ ಎಂದು ಎಸ್ಪಿ ಚನ್ನಬಸವಣ್ಣ ಮಾಹಿತಿ ನೀಡಿದರು.

ಏನೇನು ಎಷ್ಟು ಜಪ್ತಿ?

₹7.76 ಲಕ್ಷ ನಗದು  ₹23.91 ಲಕ್ಷ ಚಿನ್ನಾಭರಣ ₹40 ಸಾವಿರ ಬೆಳ್ಳಿ ಆಭರಣ ₹24 ಸಾವಿರದ 7 ಜಾನುವಾರ ₹95 ಸಾವಿರದ 6 ಪಂಪ್‌ಸೆಟ್‌ ₹18 ಲಕ್ಷದ ವಾಹನಗಳು ₹4 ಸಾವಿರದ ಆಹಾರ ಧಾನ್ಯ ₹14 ಸಾವಿರದ ಕಂಪ್ಯೂಟರ್‌ ಉಪಕರಣ ₹16 ಸಾವಿರದ ಮದ್ಯ ₹1 ಲಕ್ಷದ ವಿದ್ಯುತ್‌ ವೈರ್‌

‘ಕ್ರಿಕೆಟ್‌ ಬೆಟ್ಟಿಂಗ್‌ ಮೇಲೆ ನಿಗಾ’

‘ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಶುರುವಾಗಲಿದ್ದು ಬೆಟ್ಟಿಂಗ್ ನಡೆಯುವ ಸಾಧ್ಯತೆ ಇರುವುದರಿಂದ ವಿಶೇಷ ನಿಗಾ ವಹಿಸಲಾಗುವುದು. ಈ ಹಿಂದೆ ಬೆಟ್ಟಿಂಗ್‌ ನಡೆಸುತ್ತಿದ್ದವರ ಪಟ್ಟಿ ಪೊಲೀಸ್‌ ಇಲಾಖೆಯ ಬಳಿಯಿದ್ದು ಪುನಃ ಅವರು ಬೆಟ್ಟಿಂಗ್‌ನಲ್ಲಿ ತೊಡಗಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ಕ್ರಿಕೆಟ್‌ ಬೆಟ್ಟಿಂಗ್‌ನಿಂದ ಯುವಕರು ಸಮಯ ಹಾಗೂ ಹಣ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಮಕ್ಕಳ ಬ್ಯಾಂಕ್‌ ಖಾತೆಯ ವಿವರಗಳನ್ನು ಆಗಾಗ ಪರಿಶೀಲಿಸುತ್ತಿರಬೇಕು. ಎಲ್ಲಾದರೂ ಬೆಟ್ಟಿಂಗ್ ನಡೆಯುತ್ತಿರುವುದು ಗೊತ್ತಾದರೆ ಜಿಲ್ಲಾ ಪೊಲೀಸ್‌ ಕಂಟ್ರೋಲ್‌ ರೂಂ ಸಂಖ್ಯೆ: 9480803400 ಸಂಪರ್ಕಿಸಬಹುದು. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.