ADVERTISEMENT

ಬೀದರ್‌ | ಜಿಲ್ಲೆಯಲ್ಲಿ 28 ಸಾವಿರ ಪ್ರಕರಣಗಳು ಬಾಕಿ: ಪ್ರಕಾಶ ಎ.ಬನಸೋಡೆ

ಸೆಪ್ಟೆಂಬರ್‌ 14ರಂದು ನಗರದಲ್ಲಿ ಬೃಹತ್‌ ಲೋಕ್‌ ಅದಾಲತ್‌: ನ್ಯಾಯಾಧೀಶ ಪ್ರಕಾಶ ಎ.ಬನಸೋಡೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 15:11 IST
Last Updated 23 ಆಗಸ್ಟ್ 2024, 15:11 IST
ಪ್ರಕಾಶ ಬನಸೋಡೆ
ಪ್ರಕಾಶ ಬನಸೋಡೆ   

ಬೀದರ್‌: ‘ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 28,371 ಪ್ರಕರಣಗಳು ಬಾಕಿಯಿದ್ದು, ರಾಜಿ ಸಂಧಾನದ ಮೂಲಕ ಬಗೆಹರಿಸಲು ಸೆಪ್ಟೆಂಬರ್‌ 14ರಂದು ನಗರದಲ್ಲಿ ಬೃಹತ್‌ ಲೋಕ್‌ ಅದಾಲತ್‌ ಹಮ್ಮಿಕೊಳ್ಳಲಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಎ.ಬನಸೋಡೆ ತಿಳಿಸಿದರು.

ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಾಲಯದ ಶುಲ್ಕ ವಾಪಸ್‌ ಸಿಗಲಿದೆ. ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಎರಡೂ ಕಡೆಯವರು ದ್ವೇಷ ಮರೆತು ರಾಜಿ ಮಾಡಿಕೊಂಡರೆ ಇಬ್ಬರಿಗೂ ಪ್ರಯೋಜನ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ ಜೀವನಾಂಶ, ಚೆಕ್ ಬೌನ್ಸ್‌, ವಿದ್ಯುತ್ ಶುಲ್ಕ ಬಾಕಿ ಪ್ರಕರಣಗಳು, ಕಂದಾಯ ಅಪರಾಧಿಕ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವಂತಹ ಪ್ರಕರಣಗಳು, ಕಾರ್ಮಿಕರ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಒಟ್ಟು 29,976 ಪ್ರಕರಣಗಳನ್ನು ಈ ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥಗೊಳಿಸಲಾಗಿದೆ. 10,521 ಪೆಂಡಿಂಗ್‌ ಪ್ರಕರಣಗಳು, 19,455 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಸಲ ಲೋಕ್‌ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಗೊಳಿಸಲು ಯೋಜನೆ ರೂಪಿಸಲಾಗಿದೆ. ಕಳೆದ ಸಲಕ್ಕಿಂತ ಈ ಸಲ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಕಕ್ಷಿದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿ ಜಗದೀಶ್ವರ ದೊರೆ, ಆಕಾಶ ಸಜ್ಜನ, ಜೀವನ್‌, ನಾಗರಾಜ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.